ಸ್ವಯಂ ಪ್ರೇರಿತ ರಕ್ತದಾನದಿಂದ ರಕ್ತದ ಬೇಡಿಕೆ- ಕೊರತೆ ಅಂತರ ಇಳಿಕೆ: ಡಾ. ಶಮೀ ಶಾಸ್ತ್ರಿ

Update: 2019-01-22 10:27 GMT

ಉಡುಪಿ, ಜ. 22: ಭಾರತದಲ್ಲಿ ರಕ್ತದ ಬೇಡಿಕೆ ಮತ್ತು ಕೊರತೆಯ ಮಧ್ಯೆ ಬಹಳ ದೊಡ್ಡ ಅಂತರ ಸೃಷ್ಟಿಯಾಗಿದೆ. ಈ ಅಂತರವನ್ನು ಸ್ವಯಂ ಪ್ರೇರಿತ ರಕ್ತದಾನಿಗಳಿಂದ ಮಾತ್ರ ಸರಿದೂಗಿಸಲು ಸಾಧ್ಯ ಎಂದು ಮಣಿಪಾಲ ಕೆಎಂಸಿ ಬ್ಲಡ್‌ ಬ್ಯಾಂಕಿನ ಅಸೋಸಿಯೇಟ್ ಪ್ರೊ. ಡಾ. ಶಮೀ ಶಾಸ್ತ್ರಿ ಹೇಳಿದ್ದಾರೆ.

ಉಡುಪಿ ಮುಸ್ಲಿಮ್ ವೆಲ್‌ಫೇರ್ ಅಸೋಸಿಯೇಶನ್ ವತಿಯಿಂದ ಮಣಿ ಪಾಲ ಕೆಎಂಸಿ ಬ್ಲಡ್‌ಬ್ಯಾಂಕ್ ಸಹಯೋಗದೊಂದಿಗೆ ಉಡುಪಿ ಜಾಮೀಯ ಮಸೀದಿಯ ವಠಾರದಲ್ಲಿ ಮಂಗಳವಾರ ಆಯೋಜಿಸಲಾದ ಬೃಹತ್ ರಕ್ತದಾನ ಶಿಬಿರದಲ್ಲಿ ಅವರು ರಕ್ತದಾನದ ಮಹತ್ವ ಕುರಿತು ಮಾಹಿತಿ ನೀಡಿದರು.

ಭಾರತದಲ್ಲಿ ಶೇ. 20ರಷ್ಟು ಮಂದಿ ರಕ್ತದಾನ ಮಾಡಲು ಯೋಗ್ಯರಾದವರು ಇದ್ದಾರೆ. ಆದರೆ ಪ್ರಸ್ತುತ ಶೇ. 5ರಷ್ಟು ಮಂದಿ ಮಾತ್ರ ರಕ್ತದಾನ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ರಕ್ತದ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ರಕ್ತದಾನಿಗಳ ಕೊರತೆಯಿಂದ ರಕ್ತದ ಸಂಗ್ರಹ ಕಡಿಮೆಯಾಗುತ್ತಿದೆ ಎಂದರು.

ರಕ್ತದಾನ ಮಾಡುವುದರಿಂದ ಸಿಗುವ ತೃಪ್ತಿ ಬೇರೆ ಯಾವುದೇ ಕೆಲಸದಲ್ಲಿ ಸಿಗುವುದಿಲ್ಲ. ಇದುವೇ ರಕ್ತದಾನದ ದೊಡ್ಡ ಲಾಭ. ಹೆಚ್ಚಿನ ಸಂಖ್ಯೆಯ ಜನ ರಕ್ತದಾನ ಮಾಡದೆ ಇರಲು ಅದರ ಕುರಿತ ತಪ್ಪು ಕಲ್ಪನೆಯೇ ಮುಖ್ಯ ಕಾರಣ ವಾಗಿದೆ. ಇದನ್ನು ನಿವಾರಣೆ ಮಾಡುವ ಕೆಲಸ ಆಗಬೇಕಾಗಿದೆ. ರಕ್ತದಾನ ಮಾಡುವುದರಿಂದ ಮನುಷ್ಯನ ದೇಹಕ್ಕೆ ಲಾಭವೇ ಹೊರತು ಯಾವುದೇ ನಷ್ಟ ಇಲ್ಲ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಯಾಗಿ ಮಣಿಪಾಲ ಕೆಎಂಸಿಯ ಕಾರ್ಡಿಯೋಲಜಿ ವಿಭಾಗದ ಅಸೋಸಿಯೇಟ್ ಪ್ರೊ. ಡಾ. ಅಬ್ದುಲ್ ರಝಾಕ್ ಮಾತನಾಡಿ, ಒಬ್ಬನನ್ನು ಬದುಕಿಸಲು ಅವಕಾಶ ಇದ್ದಾಗ ಆ ಕೆಲಸ ಮಾಡುವ ಮೂಲಕ ಜೀವ ಉಳಿಸುವ ಕೆಲಸ ಮಾಡಿ ಎಂದು ಇಸ್ಲಾಮ್ ಹೇಳುತ್ತದೆ ಎಂದು ಹೇಳಿದರು.

ವೈಜ್ಞಾನಿಕವಾಗಿ ನಾವು ಎಷ್ಟೆ ಮುಂದುವರೆದರೂ ಇಂದಿಗೂ ಕೃತಕವಾಗಿ ರಕ್ತವನ್ನು ಉತ್ಪಾದಿಸಲು ನಮಗೆ ಸಾಧ್ಯವಾಗಿಲ್ಲ. ಮನುಷ್ಯನಿಗೆ ಮನುಷ್ಯನೇ ರಕ್ತ ನೀಡಬೇಕೆ ಹೊರತು ಬೇರೆ ಯಾವುದೇ ದಾರಿ ಇಲ್ಲ. ಹಾಗಾಗಿ ರಕ್ತದಾನ ಎಂಬುದು ಬಹಳ ಪ್ರಾಮುಖ್ಯವಾದುದು. ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಮಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದರು.

ಮಣಿಪಾಲ ಮಸೀದಿಯ ಅಧ್ಯಕ್ಷ ಹಾಜಿ ಕೆ.ಅಬ್ದುಲ್ಲಾ ಪರ್ಕಳ, ಉಡುಪಿ ಜಾಮೀಯ ಮಸೀದಿ ಅಧ್ಯಕ್ಷ ಸಯ್ಯದ್ ಯಾಸೀನ್, ಎಸ್‌ಐಓ ಉಡುಪಿ ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಶಾರೂಕ್, ಪಿಎಫ್‌ಐ ಉಡುಪಿ ವಿಭಾ ಗೀಯ ಅಧ್ಯಕ್ಷ ಬಶೀರ್ ಎ.ರಹಿಮಾನ್, ಮುಸ್ಲಿಮ್ ವೆಲ್‌ಫೇರ್ ಅಧ್ಯಕ್ಷ ಕಲ್ಯಾಣಪುರ ಅಬ್ದುಲ್ ಗಫೂರ್ ಉಪಸ್ಥಿತರಿದ್ದರು.

ಮಸೀದಿಯ ಹಾಫೀಝ್ ಯೂನುಸ್ ಕುರಾನ್ ಪಠಿಸಿದರು. ಮುಸ್ಲಿಮ್ ವೆಲ್‌ಫೇರ್ ಕಾರ್ಯದರ್ಶಿ ರಿಯಾಜ್ ಅಹ್ಮದ್ ಕೆ. ಸ್ವಾಗತಿಸಿದರು. ಸದಸ್ಯ ವಿ.ಎಸ್.ಉಮರ್ ವಂದಿಸಿದರು. ಮಾಜಿ ಅಧ್ಯಕ್ಷ ಮುಹಮ್ಮದ್ ಮೌಲಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News