‘ಮಂಗನ ಕಾಯಿಲೆ ವೈರಸ್ ಪತ್ತೆಯಾದಲ್ಲಿ ಲಸಿಕೆ ನೀಡಲು ಸಿದ್ಧತೆ’

Update: 2019-01-22 15:37 GMT

ಉಡುಪಿ, ಜ.22: ಜಿಲ್ಲೆಯಲ್ಲಿ ಈವರೆಗೆ ಮೂರು ತಾಲೂಕುಗಳ ಒಂಭತ್ತು ಗ್ರಾಮಗಳಲ್ಲಿ ಸತ್ತ ಮಂಗಗಳಲ್ಲಿ ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್‌ಡಿ) ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ಎಲ್ಲಾ ಗ್ರಾಮಗಳ 10ಕಿ.ಮೀ. ವ್ಯಾಪ್ತಿಯಲ್ಲಿರುವ ಎಲ್ಲಾ ಗ್ರಾಮಸ್ಥರಿಗೂ ರೋಗ ನಿರೋಧಕ ಲಸಿಕೆ ನೀಡಲು ಬೇಕಾದ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಮಂಗನ ಕಾಯಿಲೆಗೆ ಜಿಲ್ಲಾ ನೋಡೆಲ್ ಅಧಿಕಾರಿಯಾಗಿರುವ ಡಾ. ಪ್ರಶಾಂತ್ ಭಟ್ ತಿಳಿಸಿದ್ದಾರೆ.

ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ಇರುವ ಮಾರ್ಗದರ್ಶಿ ಸೂತ್ರದಂತೆ ಕೆಎಫ್‌ಡಿ ವೈರಸ್ ಪತ್ತೆಯಾದ ಕಡೆಗಳಲ್ಲಿ ಜನರಿಗೆ ನಿರೋಧಕ ಲಸಿಕೆಯನ್ನು ನೀಡಬೇಕಾಗಿದೆ. ಇದಕ್ಕಾಗಿ ಗ್ರಾಮಗಳ ವ್ಯಾಪ್ತಿಯಲ್ಲಿರುವ ಜನರ ಸಮೀಕ್ಷೆ ನಡೆಸಲಾಗುತ್ತಿದೆ. ಎಲ್ಲಾ ಗ್ರಾಮಗಳಿಂದಲೂ ವರದಿ ಸಿದ್ಧಪಡಿಸಿ ಅವುಗಳನ್ನು ಸರಕಾರದ ಅನುಮತಿಗಾಗಿ ಶೀಘ್ರವೇ ಬೆಂಗಳೂರಿಗೆ ಕಳುಹಿಸಲಾಗುವುದು ಎಂದರು.

ಆದರೆ ಈಗಾಗಲೇ ಜಿಲ್ಲೆಯ ಒಂಭತ್ತು ಕಡೆಗಳಲ್ಲಿ ಮಂಗನ ಕಾಯಿಲೆಗೆ ಕಾರಣವಾಗುವ ವೈರಸ್ ಪತ್ತೆಯಾಗಿರುವುದರಿಂದ ಈಗ ನೀಡುವ ಲಸಿಕೆಯಿಂದ ಈ ಬಾರಿ ಹೆಚ್ಚಿನ ಪ್ರಯೋಜನ ದೊರಕಲಾರದು. ಮೊದಲನೇಯದಾಗಿ ಅಂತಿಮ ವರದಿ ಇನ್ನಷ್ಟೇ ಸರಕಾರಕ್ಕೆ ಹೋಗಬೇಕಾಗಿದ್ದು, ಅದಕ್ಕೆ ಇಲಾಖೆ ಒಪ್ಪಿಗೆ ಸೂಚಿಸಿದ ಬಳಿಕ ಅಗತ್ಯ ಲಸಿಕೆಗಾಗಿ ಬೇಡಿಕೆ ಇರಿಸಬೇಕಾಗಿದೆ. ಭಾರತದಲ್ಲಿ ಕೇವಲ ಪುಣೆಯ ನೇಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ)ಯಲ್ಲಿ ಮಾತ್ರ ಲಸಿಕೆಯನ್ನು ತಯಾರಿಸಲಾಗುತ್ತದೆ. ಬೇಡಿಕೆ ಸಲ್ಲಿಸಿದ ಬಳಿಕ ಲಸಿಕೆ ತಯಾರಿಸಲು ಕನಿಷ್ಠ ತಿಂಗಳಾದರೂ ಬೇಕಾಗುತ್ತದೆ ಎಂದರು.

ಒಂದು ವೇಳೆ ಲಸಿಕೆ ದೊರೆತು ಅದನ್ನು ಚುಚ್ಚುಮದ್ದು ಮೂಲಕ ನೀಡಿದರೂ, ಅದರಿಂದ ರೋಗ ನಿರೋಧಕ ಶಕ್ತಿ ದೇಹಕ್ಕೆ ದೊರೆಯಲು ಕನಿಷ್ಠ 60 ದಿಗಳ ಕಾಲಾವಕಾಶ ಬೇಕಾಗುತ್ತದೆ. 6ರಿಂದ 65 ವರ್ಷ ವಯೋಮಾನದ ಪ್ರತಿಯೊಬ್ಬರಿಗೂ 30 ದಿನಗಳ ಅಂತರದಲ್ಲಿ ಎರಡು ಬಾರಿ ಲಸಿಕೆಯನ್ನು ನೀಡ ಬೇಕಾಗುತ್ತದೆ. ಇದರಿಂದ ಒಮ್ಮೆ ಲಸಿಕೆ ನೀಡಿದ ಮೂರು ತಿಂಗಳಲ್ಲಿ ದೇಹಕ್ಕೆ ಮಂಗನ ಕಾಯಿಲೆ ವಿರುದ್ಧ ನಿರೋಧಕ ಶಕ್ತಿ ಸಿಗುತ್ತದೆ. ಆದುದರಿಂದ ಈ ಬಾರಿ ನೀಡುವ ಲಸಿಕೆಯಿಂದ ಮುಂದಿನ ವರ್ಷಕ್ಕೆ ಪ್ರಯೋಜನವಾಗಬಹುದು ಎಂದು ಡಾ. ಭಟ್ ತಿಳಿಸಿದರು.

ಮಂಗನ ಕಾಯಿಲೆ ವರ್ಷದ ಜನವರಿಯಿಂದ ಜೂನ್ ತಿಂಗಳ ನಡುವೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಈ ಬಾರಿ ಅಕ್ಟೋಬರ್-ನವೆಂಬರ್ ತಿಂಗಳಲ್ಲೇ ಅದು ಸಾಗರದ ಆಸುಪಾಸಿನಲ್ಲಿ ಕಾಣಿಸಿಕೊಂಡಿದೆ. ವೈರಸ್ ಇರುವ ಉಣ್ಣಿಗೆ ಮಂಗಗಳು ವಾಹಕವಾಗಿದ್ದು, ಮಂಗನೊಂದಿಗೆ ಅದು ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿಗೂ ಬಂದಿರುವ ಸಾಧ್ಯತೆ ಇದೆ.

ಈಗಿನ ವ್ಯವಸ್ಥೆಯಲ್ಲಿ ಒಂದು ಪ್ರದೇಶದಲ್ಲಿ ಮಂಗನ ಕಾಯಿಲೆಗಾಗಿ ಲಸಿಕೆಯನ್ನು ನೀಡಿದ ಬಳಿಕ ಸತತ ಐದು ವರ್ಷ ಅಲ್ಲಿ ಮತ್ತೆ ಮಂಗನ ಕಾಯಿಲೆ ಕಾಣಿಸಿಕೊಳ್ಳದಿದ್ದರೆ ಲಸಿಕೆ ನೀಡುವುದನ್ನು ನಿಲ್ಲಿಸಲಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ 1980ರ ಬಳಿಕ ಕೆಎಫ್‌ಡಿ ಕಾಯಿಲೆ ಕಾಣಿಸಿಕೊಳ್ಳದಿರುವುದರಿಂದ ಇಲ್ಲಿ ಲಸಿಕೆಯನ್ನು ನೀಡುತ್ತಿಲ್ಲ. ಹೀಗಾಗಿ ಈಗ ಮಂಗನ ಕಾಯಿಲೆಗೆ ನೀಡುವ ಲಸಿಕೆಯನ್ನು ಮುಂದಿನ ಐದು ವರ್ಷ ಮುಂದುವರಿಸಬೇಕಾಗುತ್ತದೆ ಎಂದರು.

ಆದುದರಿಂದ ಈ ಬಾರಿ ರೋಗದ ವಿರುದ್ಧ ಲಸಿಕೆಯನ್ನು ನೀಡಿದರೆ ಅದರ ಲಾಭ 2020ಕ್ಕಷ್ಟೇ ದೊರೆಯಬಹುದು. ಹೀಗಾಗಿ ಈ ಬಾರಿ ರೋಗದ ಕುರಿತು ಜನರಿಗೆ ಜಾಗೃತಿ ಮೂಡಿಸಿ ಅವರು ಕಾಡಿನತ್ತ ಹೆಚ್ಚು ಹೋಗದಂತೆ, ಯಾರಿಗಾದರೂ ಜ್ವರ ಕಾಣಿಸಿಕೊಂಡರೆ ಈ ಬಗ್ಗೆ ಕೂಡಲೇ ಪಿಎಚ್‌ಸಿಗಳಿಗೆ ಮಾಹಿತಿ ನೀಡಲು ತಿಳಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಇದುವರೆಗೆ ಎಲ್ಲೂ ಜನರಲ್ಲಿ ರೋಗದ ಚಿನ್ನೆ ಕಾಣಿಸಿಕೊಂಡಿಲ್ಲ. ಆರೋಗ್ಯ ಇಲಾಖೆ ತೆಗೆದುಕೊಂಡ ತುರ್ತು ಕ್ರಮಗಳು, ಮೂಡಿಸಿದ ಜನಜಾಗೃತಿ ಇದಕ್ಕೆ ಕಾರಣವಾಗಿರಬಹುದು. ಕುಂದಾಪುರ ತಾಲೂಕಿನಲ್ಲಿ ಜನರೇ ಡಿಎಂಪಿ ತೈಲಕ್ಕಾಗಿ ಬೇಡಿಕೆ ಇಡುತ್ತಿರುವುದು ಜನರಿಗೆ ರೋಗದ ಕುರಿ ತಂತೆ ಮೂಡಿರುವ ಜಾಗೃತಿಗೆ ದ್ಯೋತಕ ಎಂದು ಶಂಕರನಾರಾಯಣದ ಅರಣ್ಯ ಇಲಾಖೆ ಸಿಬ್ಬಂದಿ ಯೊಬ್ಬರು ತಿಳಿಸಿದ್ದಾರೆ.

ಮತ್ತೆ 7 ಮಂಗಗಳ ಶವ

ಜಿಲ್ಲೆಯ ವಿವಿದೆಡೆಗಳಲ್ಲಿ ಇಂದು ಮತ್ತೆ ಏಳು ಸತ್ತ ಮಂಗಗಳ ಕಳೇಬರ ಪತ್ತೆಯಾಗಿವೆ. ಉಡುಪಿ ತಾಲೂಕು ಸಾಬರಕಟ್ಟೆ ಪಿಎಚ್‌ಸಿ ವ್ಯಾಪ್ತಿಯ ಶಿರಿಯಾರ ದಲ್ಲಿ ಮೂರು, ಬೈಂದೂರಿನಲ್ಲಿ ಎರಡು, ಬಸ್ರೂರು ಕಂದಾವರದಲ್ಲಿ ಒಂದು ಹಾಗೂ ನಂದಳಿಕೆಯಲ್ಲಿ ಒಂದು ಕಳೇಬರ ಪತ್ತೆಯಾಗಿವೆ.

ಇವುಗಳಲ್ಲಿ ಬೈಂದೂರಿನ ಎರಡು ಹಾಗೂ ನಂದಳಿಕೆಯ ಒಂದು ಮಂಗನ ಪೋಸ್ಟ್ ಮಾರ್ಟಂ ನಡೆಸಿ ವಿಸೇರಾವನ್ನು ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ ಎಂದು ಡಾ.ಪ್ರಶಾಂತ್ ಭಟ್ ತಿಳಿಸಿದರು. ಉಳಿದ ನಾಲ್ಕು ಮಂಗಗಳ ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದವರು ಹೇಳಿದರು.

ಈ ನಡುವೆ ಉಡುಪಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾದ ಬೆಳಪು ಮತ್ತು ಕೊಡ್ಲಾಡಿಯ ಇಬ್ಬರು ಮಹಿಳೆಯರ ರಕ್ತವನ್ನು ಮುಂಜಾಗ್ರತಾ ಕ್ರಮವಾಗಿ ಕೆಎಫ್‌ಡಿ ಪರೀಕ್ಷೆಗೆ ಮಣಿಪಾಲ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಎರಡರಲ್ಲೂ ಮಂಗನಕಾಯಿಲೆಯ ಅಂಶ ಪತ್ತೆಯಾಗಿಲ್ಲ. ಹೀಗಾಗಿ ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಎಲ್ಲಿಂದಲೂ ಶಂಕಿತ ಪ್ರಕರಣ ವರದಿಯಾಗಿಲ್ಲ ಎಂದು ಅವರು ಹೇಳಿದರು.

ಮಣಿಪಾಲದಲ್ಲಿ 30 ಮಂದಿಗೆ ಚಿಕಿತ್ಸೆ

ಸಾಗರ ಆಸುಪಾಸಿನಿಂದ ಇಂದು ಮತ್ತಿಬ್ಬರು ಶಂಕಿತ ಮಂಗನಕಾಯಿಲೆ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದ ಇದುವರೆಗೆ ಇಲ್ಲಿಗೆ ದಾಖಲಾದ ರೋಗಿಗಳ ಸಂಖ್ಯೆ 109ಕ್ಕೇರಿದೆ. ಇವರಲ್ಲಿ ಮೂವರು ಜ್ವರ ಮರುಕಳಿಸಿದ್ದರಿಂದ ಮರು ದಾಖಲಾದವರು ಸೇರಿದ್ದಾರೆ.

ಪರೀಕ್ಷೆಯ ಬಳಿಕ ಇವರಲ್ಲಿ 45 ಮಂದಿಯಲ್ಲಿ ಮಂಗನಕಾಯಿಲೆ ವೈರಸ್ ಪತ್ತೆಯಾಗಿದ್ದು, 64 ಮಂದಿಯಲ್ಲಿ ಇಲ್ಲದಿರುವುದು ಕಂಡುಬಂದಿದೆ. ಮೂವರ ಪರೀಕ್ಷಾ ವರದಿ ಬರಲು ಬಾಕಿ ಇದೆ ಎಂದು ತಿಳಿಸಿದೆ.

ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದವರಲ್ಲಿ 81 ಮಂದಿ ಈಗಾಗಲೇ ಗುಣಮುಖರಾಗಿ ಬಿಡುಗಡೆಗೊಂಡಿದ್ದು, 30 ಮಂದಿ ಇನ್ನೂ ಚಿಕಿತ್ಸೆ ಪಡೆಯುತಿದ್ದಾರೆ. ಇವರಲ್ಲಿ ಇಬ್ಬರು ಮರು ದಾಖಲಾದವರೂ ಸೇರಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News