ರಾಜೀವ್ ಗಾಂಧಿ ಹೇಳಿಕೆ ಉಲ್ಲೇಖಿಸಿ ಕಾಂಗ್ರೆಸನ್ನು ಕುಟುಕಿದ ಮೋದಿ

Update: 2019-01-22 16:02 GMT

ವಾರಾಣಸಿ, ಜ.22: ಒಂದು ರೂಪಾಯಿ ಬಿಡುಗಡೆ ಮಾಡಿದರೆ ಅದರಲ್ಲಿ ಫಲಾನುಭವಿಗಳಿಗೆ ತಲುಪುವುದು ಕೇವಲ 15 ಪೈಸೆ ಮಾತ್ರ ಎಂಬ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹೇಳಿಕೆಯನ್ನೇ ಉಲ್ಲೇಖಿಸಿ ಪ್ರಧಾನಿ ಮೋದಿ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ.

ವಾರಣಾಸಿಯಲ್ಲಿ ಪ್ರವಾಸೀ ಭಾರತೀಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೋದಿ, ರೂಪಾಯಿಯಲ್ಲಿ ಕೇವಲ 15 ಪೈಸೆ ಮಾತ್ರ ಫಲಾನುಭವಿಗಳಿಗೆ ತಲುಪುತ್ತಿದೆ ಎಂದು ಮಾಜಿ ಪ್ರಧಾನಿ ಈ ಹಿಂದೆ ಹೇಳಿರುವುದು ನಿಮಗೆಲ್ಲಾ ತಿಳಿದಿದೆ. ಹಲವಾರು ವರ್ಷ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷ ಈ ಸತ್ಯವನ್ನು ಒಪ್ಪಿಕೊಂಡರೂ ಸೋರಿಕೆಯನ್ನು ತಡೆಗಟ್ಟಲು ಸರಕಾರ ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ. ಆದರೆ ತಮ್ಮ ಸರಕಾರ ಈ ಪರಿಸ್ಥಿತಿಯನ್ನು ಸರಿಪಡಿಸಲು ಮುಂದಾಯಿತು. ಶೇ.85 ಸೋರಿಕೆಯನ್ನು ತಂತ್ರಜ್ಞಾನದ ಮೂಲಕ ಶೇ.100ರಷ್ಟು ತಡೆಗಟ್ಟಲಾಗಿದೆ. ವಿವಿಧ ಯೋಜನೆಯಡಿ ಫಲಾನುಭವಿಗಳ ಖಾತೆಗೆ ನೇರವಾಗಿ 5,80,000 ಕೋಟಿ ರೂ.ಯನ್ನು ವರ್ಗಾಯಿಸಲಾಗಿದೆ. ಒಂದು ವೇಳೆ ದೇಶದಲ್ಲಿ ಹಳೆಯ ವ್ಯವಸ್ಥೆಯೇ ಮುಂದುವರಿದಿದ್ದರೆ ಏನಾಗಿರುತ್ತಿತ್ತು ಯೋಚಿಸಿ ನೋಡಿ. ಆಗ 4,50,000 ಕೋಟಿ ರೂ. ಮಾಯವಾಗಿ ಬಿಡುತ್ತಿತ್ತು ಎಂದು ಹೇಳಿದರು.

ಅನಿವಾಸಿ ಭಾರತೀಯರು ದೇಶದ ರಾಯಭಾರಿಗಳು ಎಂದು ಬಣ್ಣಿಸಿದ ಪ್ರಧಾನಿ, ಇವರು ದೇಶದ ಸಾಮರ್ಥ್ಯ ಮತ್ತು ದಕ್ಷತೆಯ ಸಂಕೇತವಾಗಿದ್ದಾರೆ . ಭಾರತ ಮೂಲದ ಜನರು ಮಾರಿಷಸ್, ಪೋರ್ಚುಗಲ್ ಹಾಗೂ ಐರ್‌ಲ್ಯಾಂಡ್ ಮುಂತಾದ ದೇಶಗಳಲ್ಲಿ ನಾಯಕತ್ವದ ಪಾತ್ರ ನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News