ಎಂಜೆ ಅಕ್ಬರ್ ಮಾನಹಾನಿ ಪ್ರಕರಣ: ಸಮನ್ಸ್ ಬಗ್ಗೆ ಜ. 29ರಂದು ನಿರ್ಧಾರ

Update: 2019-01-22 16:04 GMT

ಹೊಸದಿಲ್ಲಿ, ಜ.22: ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾಜಿ ಕೇಂದ್ರ ಸಚಿವ ಎಂಜೆ ಅಕ್ಬರ್ ದಾಖಲಿಸಿದ್ದ ಮಾನಹಾನಿ ಪ್ರಕರಣದಲ್ಲಿ ಪ್ರಿಯಾ ರಮಣಿಗೆ ಸಮನ್ಸ್ ಜಾರಿಗೊಳಿಸುವ ಬಗ್ಗೆ ದಿಲ್ಲಿಯ ನ್ಯಾಯಾಲಯ ಜನವರಿ 29ರಂದು ನಿರ್ಧರಿಸಲಿದೆ.

20 ವರ್ಷದ ಹಿಂದೆ, ಆಗ ಪತ್ರಿಕೆಯೊಂದರ ಸಂಪಾದಕರಾಗಿದ್ದ ಅಕ್ಬರ್ ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಪ್ರಿಯಾ ರಮಣಿ ಆರೋಪಿಸಿದ್ದರು. ಬಳಿಕ 12ಕ್ಕೂ ಹೆಚ್ಚು ಮಹಿಳೆಯರು ಅಕ್ಬರ್ ವಿರುದ್ಧ ಇದೇ ಆರೋಪವನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ , ವಿದೇಶ ವ್ಯವಹಾರ ಇಲಾಖೆಯ ಸಹಾಯಕ ಸಚಿವರಾಗಿದ್ದ ಅಕ್ಬರ್ ಪದತ್ಯಾಗ ಮಾಡಿದ್ದರು ಮತ್ತು ಪ್ರಿಯಾ ರಮಣಿ ವಿರುದ್ಧ 41 ಪುಟಗಳ ಮಾನಹಾನಿ ಪ್ರಕರಣ ದಾಖಲಿಸಿದ್ದರು.

ಸುಳ್ಳು ಆರೋಪ ಮಾಡಿ ತಾನು 40 ವರ್ಷದಿಂದ ಗಳಿಸಿದ್ದ ಪ್ರತಿಷ್ಟೆಗೆ ಹಾನಿ ಎಸಗಿದ್ದಲ್ಲದೆ ಸಚಿವ ಸ್ಥಾನಕ್ಕೂ ರಾಜೀನಾಮೆ ಕೊಡುವಂತಾಗಿದೆ. ಪ್ರಿಯಾ ಮಾಡಿರುವ ಟ್ವೀಟ್‌ಗಳನ್ನು ವಿದೇಶದ ಮಾಧ್ಯಮಗಳೂ ಪ್ರಸಾರ ಮಾಡಿವೆ. ಆದ್ದರಿಂದ ಮಾನಹಾನಿ ಮಾಡಿರುವ ಪ್ರಿಯಾ ರಮಣಿಗೆ ಶಿಕ್ಷೆ ವಿಧಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಮಂಗಳವಾರ ಅಕ್ಬರ್ ಪರ ವಕೀಲರ ಹೇಳಿಕೆ ಆಲಿಸಿದ ನ್ಯಾಯಾಲಯ, ಪ್ರಿಯಾ ರಮಣಿಗೆ ಸಮನ್ಸ್ ನೀಡುವ ಬಗ್ಗೆ ಜನವರಿ 29ರಂದು ತೀರ್ಪು ನೀಡುವುದಾಗಿ ತಿಳಿಸಿದೆ. ಮಾನಹಾನಿಯ ಕೃತ್ಯಕ್ಕೆ 2 ವರ್ಷದ ಜೈಲುಶಿಕ್ಷೆ ಅಥವಾ ದಂಡ, ಅಥವಾ ಎರಡನ್ನೂ ವಿಧಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News