ಕೇರಳ ನೆರೆ ಪರಿಹಾರ ನಿಧಿಗೆ ನೀಡಿದ್ದ 3.26 ಕೋಟಿ ರೂ. ಮೊತ್ತದ ಚೆಕ್ ಬೌನ್ಸ್ !

Update: 2019-01-22 16:07 GMT

ತಿರುವನಂತಪುರಂ, ಜ.22: ಕಳೆದ ವರ್ಷ ಕೇರಳದಲ್ಲಿ ಸಂಭವಿಸಿದ ನೆರೆಹಾವಳಿಯಿಂದ ಸಂತ್ರಸ್ತರಾದವರಿಗೆ ಹಲವೆಡೆಗಳಿಂದ ನೆರವಿನ ಕೊಡುಗೆ ಬಂದಿತ್ತು. ಆದರೆ ನೈಸರ್ಗಿಕ ವಿಪತ್ತಿನಂತಹ ಘಟನೆಗಳು ಸಂಭವಿಸಿದಾಗ ಪರಿಹಾರ ನಿಧಿಗೆ ದೇಣಿಗೆ ನೀಡುವುದರಲ್ಲೂ ಪ್ರಚಾರ ಗಿಟ್ಟಿಸಿಕೊಳ್ಳುವ ಚಾಳಿ ಕೆಲವರಲ್ಲಿದೆ ಎಂಬುದು ಇದೀಗ ದೃಢಪಟ್ಟಿದೆ.

ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿ(ಸಿಎಂಡಿಆರ್‌ಎಫ್)ಗೆ ನೀಡಲಾಗಿರುವ 3.26 ಕೋಟಿ ರೂ. ಮೊತ್ತದ ಚೆಕ್ ಹಾಗೂ ಡಿಡಿಗಳು (ಹಣವಿಲ್ಲದ ಕಾರಣ)ಬ್ಯಾಂಕ್‌ಗಳಿಂದ ತಿರಸ್ಕೃತಗೊಂಡಿವೆ. ಮಂಗಳವಾರ ಕೇರಳ ವಿಧಾನಸಭೆಯಲ್ಲಿ ಕಾಸರಗೋಡು ಶಾಸಕ ಎನ್‌ಎ ನೆಲ್ಲಿಕುನ್ನು ಎತ್ತಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, 395 ಚೆಕ್ ಹಾಗೂ ಡಿಡಿಗಳು ಬ್ಯಾಂಕ್‌ನಿಂದ ತಿರಸ್ಕೃತಗೊಂಡಿವೆ ಎಂದು ತಿಳಿಸಿದ್ದಾರೆ.

2018ರ ನವೆಂಬರ್ 30ರವರೆಗೆ ಪರಿಹಾರ ನಿಧಿಗೆ ಒಟ್ಟು 2,797.67 ಕೋಟಿ ರೂ. ಕೊಡುಗೆ ಬಂದಿದೆ. ಇದರಲ್ಲಿ ಆನ್‌ಲೈನ್ ವರ್ಗಾವಣೆಯ ಮೂಲಕ 260.45 ಕೋಟಿ ರೂ. , ನಗದು, ಚೆಕ್ ಹಾಗೂ ಡಿಡಿ ಮೂಲಕ 2,537.22 ಕೋಟಿ ರೂ. ಬಂದಿದೆ. ಇದರಲ್ಲಿ 7.47 ಕೋಟಿ ರೂ.ಮೊತ್ತದ ಕೊಡುಗೆ ಚೆಕ್ ಮೂಲಕ ಸಂದಿದೆ. ಆದರೆ ಇದರಲ್ಲಿ 3.26 ಕೋಟಿ ರೂ. ಮೊತ್ತದ ಚೆಕ್, ಡಿಡಿ ಬ್ಯಾಂಕ್‌ನಿಂದ ತಿರಸ್ಕೃತಗೊಂಡಿವೆ. ಇತ್ತೀಚಿನ ಅಂಕಿಅಂಶದ ಪ್ರಕಾರ ನೆರೆ ಪರಿಹಾರ ನಿಧಿಗೆ ಒಟ್ಟು 3226.21 ಕೋಟಿ ರೂ. ಸಂದಾಯವಾಗಿದ್ದರೆ, 1199.69 ಕೋಟಿ ರೂ. ವೆಚ್ಚವಾಗಿದೆ.

ಪರಿಹಾರ ನಿಧಿಯಿಂದ 7.37 ಲಕ್ಷ ಜನ ತಕ್ಷಣದ ಫಲಾನುಭವಿಗಳಾಗಿದ್ದು, ಇವರಿಗೆ ಒಟ್ಟು 457.30 ಕೋಟಿ ರೂ. ಪರಿಹಾರ ನೀಡಲಾಗಿದೆ. ಮನೆಗೆ ಹಾನಿಯಾದ 2,43,207 ಕುಟುಂಬಗಳಿಗೆ ತಮ್ಮ ಮನೆಯನ್ನು ಪುನನಿರ್ಮಿಸಿಕೊಳ್ಳಲು ಒಟ್ಟು 1,256.55 ಕೋಟಿ ರೂ. ನೀಡಲಾಗಿದೆ. ನೆರವು ಪಡೆದ ಜಿಲ್ಲೆಗಳಲ್ಲಿ ಎರ್ನಾಕುಳಂ , ಅಳಪ್ಪುಝ, ಹಾಗೂ ತ್ರಿಶ್ಯೂರ್ ಮೊದಲ ಮೂರು ಸ್ಥಾನದಲ್ಲಿವೆ. ಈ ಮಧ್ಯೆ, ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಯ ನಿರ್ವಹಣೆಯಲ್ಲಿ ಅವ್ಯವಸ್ಥೆಯ ಕುರಿತು ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಸಿ.ಕುರಿಯಾಕೋಸ್, ಕೆಪಿ ಬಾಲಚಂದ್ರನ್ ಹಾಗೂ ಎಕೆ ಬಶೀರ್ ಅವರನ್ನು ಹೊಂದಿರುವ ಲೋಕಾಯುಕ್ತ ಪೀಠವು ಕಳೆದ ವಾರ ಮುಖ್ಯಮಂತ್ರಿ ಹಾಗೂ ಸಂಪುಟದ ಸಚಿವರಿಗೆ ನೋಟಿಸ್ ಜಾರಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News