ಎನ್‌ಎಂಪಿಟಿಗೆ ಸತತ ಎರಡನೆ ಬಾರಿ ದೇಶದ ಸ್ವಚ್ಛ ಬಂದರು ಪುರಸ್ಕಾರ: ಎಂ.ಟಿ.ಕೃಷ್ಣ ಬಾಬು

Update: 2019-01-22 16:50 GMT

ಮಂಗಳೂರು, ಜ.22: ಮಂಗಳೂರು ಬಂದರು ದೇಶದ 12 ಬೃಹತ್ ಬಂದರುಗಳ ಪೈಕಿ ‘ಸ್ವಚ್ಛ ಬಂದರು’ ಪುರಸ್ಕಾರಕ್ಕೆ ಪಾತ್ರವಾಗಿದೆ. ಭಾರತ ಸರಕಾರದ ನೌಕಾ ಸಚಿವಾಲಯದ ವತಿಯಿಂದ (ಭಾರತ ಸರಕಾರದ ಗುಣಮಟ್ಟದ ಮಾಪನ ಸಮಿತಿಯ ಮೂಲಕ ಆಯ್ಕೆಗೊಂಡ) ನೀಡಲಾಗುವ ಈ ಸ್ವಚ್ಛ ಸರ್ವೇಕ್ಷಣಾ ಪುರಸ್ಕಾರಕ್ಕೆ ಸತತ ಎರಡನೆ ವರ್ಷ ಪಾತ್ರವಾಗಿದೆ ಎಂದು ನವಮಂಗಳೂರು ಬಂದರು ಮಂಡಳಿ(ಎನ್‌ಎಂಪಿಟಿ)ಯ ಅಧ್ಯಕ್ಷ ಎಂ.ಟಿ.ಕೃಷ್ಣ ಬಾಬು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

2017ರಲ್ಲೂ ಮಂಡಳಿ ಈ ಪುರಸ್ಕಾರಕ್ಕೆ ಪಾತ್ರವಾಗಿತ್ತು. ಅಲ್ಲದೆ ಎನ್‌ಎಂಪಿಟಿ ‘ಸಮುದ್ರಿಲ್ ಪರ್ಯಾವರಣ ಸಂರಕ್ಷಣಾ ಪ್ರಶಸ್ತಿ’ಗೆ ಪಾತ್ರವಾಗಿದೆ. ನವಮಂಗಳೂರು ಬಂದರು ಮಂಡಳಿ 2018ರ ಎಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಒಟ್ಟು 492.50 ಕೋಟಿ ರೂ. ಆದಾಯ ಗಳಿಸಿದ್ದು, ಈ ಪೈಕಿ 243.35 ಕೋಟಿ ರೂ. ಲಾಭ ಗಳಿಸಿದೆ. ಇದರೊಂದಿಗೆ ಆದಾಯ ಗಳಿಕೆಯಲ್ಲಿ ಶೇ.55.83 ಏರಿಕೆಯಾಗಿದೆ. 2017ರಲ್ಲಿ ಲಾಭ ಗಳಿಕೆ 156.16 ಕೋಟಿ ರೂ.ಗೆ ಸೀಮಿತವಾಗಿತ್ತು ಎಂದರು.

ಬಂದರ್‌ನಲ್ಲಿ 99,856 ಟನ್ ಯೂನಿಟ್ ಕಂಟೈನರ್ ಸರಕುಗಳನ್ನು ನಿರ್ವಹಣೆ ಮಾಡಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದಾಗ ಶೇ.23ರಷ್ಟು ಹೆಚ್ಚು ನಿರ್ವಹಣೆ ಮಾಡಲಾಗಿದೆ. ಹಾಲಿ ವರ್ಷದಲ್ಲಿ 14 ಪ್ರವಾಸಿಗರ ಹಡಗು ಬಂದರಿಗೆ ಭೇಟಿ ನೀಡಿದ್ದು, ಒಟ್ಟು 32 ಪ್ರವಾಸಿ ಹಡಗು ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಕೃಷ್ಣ ಬಾಬು ತಿಳಿಸಿದ್ದಾರೆ.

ಚೆಟ್ಟಿನಾಡ್ ಕೋಲ್ ಟರ್ಮಿನಲ್ ಬರ್ತ್ ನಂ.16ರ ಯಾಂತ್ರಿಕರಣ ಕಾಮಗಾರಿಯು ಮಾರ್ಚ್‌ನಲ್ಲಿ ಆರಂಭಗೊಳ್ಳಲಿದೆ. ಬರ್ತ್ ನಂಬ್ರ 14ನ್ನು 280.71 ಕೊಟಿ ರೂ. ವೆಚ್ಚದಲ್ಲಿ ಯಾಂತ್ರೀಕೃತ ಬರ್ತ್ ಆಗಿ ಪರಿವರ್ತಿಸಲಾಗುವುದು ಎಂದು ಅವರು ವಿವರಿಸಿದರು.

ಮಂಗಳೂರು ಬಂದರು ಮಂಡಳಿಯ ವತಿಯಿಂದ ನಗರಕ್ಕೆ ಭೇಟಿ ನೀಡುವ ಪ್ರವಾಸಿಗರು ಸಂದರ್ಶಿಸುವ ಸ್ಥಳಗಳಲ್ಲಿ ಶುಚಿತ್ವ ಹಾಗೂ ಕುಡಿಯುವ ನೀರಿನ ವುವಸ್ಥೆಗಾಗಿ ಸಿಎಸ್‌ಆರ್ ನಿಧಿಯಿಂದ ಅನುದಾನ ನೀಡಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಕುದ್ರೋಳಿ, ಮೂಡುಬಿದಿರೆ, ಕಾರ್ಕಳ ಗೊಮ್ಮಟ ಬೆಟ್ಟ ಮತ್ತು ಪಿಲಿಕುಳ ಸೇರಿದಂತೆ ಆರು ಪ್ರದೇಶಗಳಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ಶೌಚಾಲಯ ಹಾಗೂ ಕಿಯೋಸ್ಕ್ ಯಂತ್ರ ಅಳವಡಿಸಿ ಕುಡಿಯುವ ನೀರಿನ ಸೌಕರ್ಯವನ್ನು ಅಳವಡಿಸಲಾಗುವುದು ಎಂದು ಅವರು ಹೇಳಿದರು.

ಕರಾವಳಿಯ ಪ್ರದೇಶದ ಸ್ಥಳೀಯ ಶಾಲೆ ಕಾಲೇಜುಗಳು, ಆಸ್ಪತ್ರೆ ಸೇರಿದಂತೆ ವಿವಿಧ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಮಂಡಳಿಯ ಸಿಎಸ್‌ಆರ್ ನಿಧಿ ಯಿಂದ ಕಳೆದ ವರ್ಷ 4.89 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ಬಾರಿಯೂ ಸುಮಾರು 4ರಿಂದ 5 ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ಕೃಷ್ಣ ಬಾಬು ತಿಳಿಸಿದ್ದಾರೆ.

ಕೂಳೂರಿನಲ್ಲಿ ಮೀನುಗಾರಿಕಾ ಜೆಟ್ಟಿ ನಿರ್ಮಾಣ

ಮಂಗಳೂರಿನ ಕೂಳೂರಿನಲ್ಲಿ 190 ಕೋಟಿ ರೂ. ವೆಚ್ಚದಲ್ಲಿ ಮೀನುಗಾರಿಕಾ ಜೆಟ್ಟಿ ನಿರ್ಮಾಣವಾಗಲಿದ್ದು, ಇದಕ್ಕೆ ಅನುದಾನ ಬಿಡುಗಡೆಯಾಗಿದೆ. ಪ್ರಸಕ್ತ ವರ್ಷ ಬ್ರೇಕ್ ವಾಟರ್ ನಿರ್ಮಾಣದೊಂದಿಗೆ ಕಾಮಗಾರಿ ಆರಂಭಗೊಳ್ಳಲಿದ್ದು, ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ.
- ಎಂ.ಟಿ.ಕೃಷ್ಣ ಬಾಬು, ಎನ್‌ಎಂಪಿಟಿ ಅಧ್ಯಕ್ಷ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News