ನಾಗರಿಕ ತಿದ್ದುಪಡಿ ಮಸೂದೆ ವಿರುದ್ಧ ಮುಂದುವರಿದ ಪ್ರತಿಭಟನೆ: ಸಚಿವ ಹಿಮಾಂತ ಬಿಸ್ವಾಗೆ ಕಪ್ಪು ಬಾವುಟ ಪ್ರದರ್ಶನ

Update: 2019-01-22 16:59 GMT

ಗುವಾಹತಿ, ಜ. 22 : ವಿವಾದಾತ್ಮಕ ನಾಗರಿಕ (ತಿದ್ದುಪಡಿ) ಮಸೂದೆ ವಿರುದ್ಧದ ಪ್ರತಿಭಟನೆ ಮುಂದುವರಿದಿದ್ದು, ಬಾರ್ಪೇಟ ಜಿಲ್ಲೆಯಲ್ಲಿ ಮಂಗಳವಾರ ಅಸ್ಸಾಂನ ಹಣಕಾಸು ಸಚಿವ ಹಿಮಾಂತ ಬಿಸ್ವಾ ಶರ್ಮಾ ವಿರುದ್ಧ ಕಪ್ಪು ಪತಾಕೆ ಪ್ರದರ್ಶಿಸಲಾಯಿತು.

ಬಿಜೆಪಿ ಕಾರ್ಯಕರ್ತರ ಸಭೆಗೆ ತೆರಳುತ್ತಿದ್ದ ಶರ್ಮಾ ಅವರಿಗೆ ಕಪ್ಪು ಪತಾಕೆ ಪ್ರದರ್ಶಿಸಿದ ಹಾಗೂ ರಸ್ತೆ ತಡೆ ನಡೆಸಿದ ಆರೋಪದಲ್ಲಿ ಎಎಎಸ್‌ಯು, ಕೃಷಿಕ ಮುಕ್ತಿ ಸಂಗ್ರಾಮ ಸಮಿತಿ ಹಾಗೂ ಎಜೆವೈಸಿಪಿಯ 20 ಪ್ರತಿಭಟನೆಕಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಶಿವನಗರದಲ್ಲಿ ವಿದ್ಯಾರ್ಥಿ ಪ್ರತಿಭಟನೆಕಾರರು ಎರಡು ಗಂಟೆಗಳ ‘ಗಾನ ಹರತಾಳ’ ನಡೆಸಿದರು. ಈ ಸಂದರ್ಭ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ವಾಹನಗಳು ರಸ್ತೆಗಿಳಿಯಲಿಲ್ಲ. ಶಿಬಸಾಗರ್‌ನ ನಾಝಿರಾ ಪಟ್ಟಣದ ಮುಖ್ಯ ರಸ್ತೆಯಲ್ಲಿ ಟಯರ್ ದಹಿಸಿದ ಪರಿಣಾಮ ಕೆಲವು ಕಾಲ ಸಂಚಾರಕ್ಕೆ ತಡೆ ಉಂಟಾಯಿತು. ದಿಗ್ಬೋಯಿಯಲ್ಲಿ ಎಜೆವೈಸಿಪಿ ಸದಸ್ಯರು ಮೆರವಣಿಗೆ ನಡೆಸಿದರು ಹಾಗೂ ಅನಂತರ ಟಿಂಗ್ರೈ ಪಾಯಿಂಟ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸರ್ಬಾನಂದ ಸೋನೊವಾಲ ಅವರ ಪ್ರತಿಕೃತಿ ದಹಿಸಿದರು. ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಸಮುದಾಯ ವಿಭಿನ್ನವಾಗಿ ಪ್ರತಿಭಟನೆ ನಡೆಸಿತು.

ರಾಜ್ಯ ರಾಜಧಾನಿಯಲ್ಲಿ ಕಾಟನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಕಾಲೇಜು ವಿದ್ಯಾರ್ಥಿಗಳು ಕೂಡ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಗೋಲಪಾರ ಕಾಲೇಜು ಹಾಗೂ ಮೊರಾನ ಕಾಲೇಜು ಕೂಡ ರಸ್ತೆಗಿಳಿದು ಪ್ರತ್ಯೇಕ ಪ್ರತಿಭಟನೆ ನಡೆಸಿತು. ಎಎಎಸ್‌ಯು ಹಾಗೂ ಇತರ 30 ಸಂಘಟನೆಗಳು ಗುವಾಹತಿಯಲ್ಲಿ ಸಾರ್ವಜನಿಕ ರ್ಯಾಲಿ ನಡೆಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News