ವೈಜ್ಞಾನಿಕ ಗೇರು ಕೃಷಿಯಿಂದ ಹೆಚ್ಚಿನ ಪ್ರಗತಿ ಸಾಧ್ಯ: ಸಚಿವೆ ಮರ್ಸಿಕುಟ್ಟಿ ಅಮ್ಮ

Update: 2019-01-22 17:04 GMT

ಪುತ್ತೂರು, ಜ. 22: ಭಾರತದಲ್ಲಿ ಆಹಾರ ಬೆಳೆಯಾಗಿರುವ ಗೇರು ಕೃಷಿಯು ಪ್ರಮುಖ ಉದ್ಯಮವಾಗಿದ್ದು,  ಇದು ರೈತರ ಆಧಾಯವನ್ನು ದ್ವಿಗುಣಗೊಳಿಸಲು ಸಹಕಾರಿಯಾಗಿದೆ. ಗೇರು ಸಂಶೋಧನಾ ಕೇಂದ್ರಗಳಲ್ಲಿ, ವಿಶ್ವವಿದ್ಯಾನಿಲಯಗಳ ಮೂಲಕ ಬೆಳೆಗಾರರಿಗೆ ವೈಜ್ಞಾನಿಕ ಗೇರು ಕೃಷಿಗೆ ಇನ್ನಷ್ಟು ಉತ್ತೇಜನ ನೀಡುವ ಮೂಲಕ ಗೇರು ಕೃಷಿಯ ಭವಿಷ್ಯ ಇನ್ನಷ್ಟು ಬೆಳವಣಿಗೆ ಹೊಂದಬಹುದು ಎಂದು ಕೇರಳ ರಾಜ್ಯದ ಮೀನುಗಾರಿಕೆ, ಬಂದರು ಹಾಗೂ ಗೇರು ಉದ್ಯಮದ ಸಚಿವೆ ಜೆ. ಮರ್ಸಿಕುಟ್ಟಿ ಅಮ್ಮ ಹೇಳಿದರು.

ಅವರು ಪುತ್ತೂರು ತಾಲೂಕಿನ ಕೆಮ್ಮೆಂಜೆ ಗ್ರಾಮದ ಮೊಟ್ಟೆತ್ತಡ್ಕದಲ್ಲಿರುವ ಕೇಂದ್ರೀಯ ಗೇರು ಸಂಶೋಧನಾ ನಿರ್ದೇಶನಾಲಯ(ಡಿಸಿಆರ್)ದಲ್ಲಿ ಮಂಗಳವಾರ ನಡೆದ ಗೇರು ದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಾಗತಿಕ ಪಾಲ್ಗೊಳ್ಳುವಿಕೆಯ ಭಾಗವಾಗಿ ಗೇರು ಸಂಶೋಧನಾ ನಿರ್ದೇಶನಾಲಯ ಕೆಲಸ ಮಾಡುತ್ತಿದೆ. ಗೇರು ಕೃಷಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು, ಸಂಶೋಧನೆಗೆ ಹಾಗೂ ಗೇರು ಕೃಷಿಯ ನಿರ್ಧಿಷ್ಟ ಸಮಸ್ಯೆಗಳನ್ನು ಬಗೆಹರಿಸಲು ಗೇರು ನಿರ್ದೇಶನಾಲಯ ಗಮಹನಹರಿಸುತ್ತಿದೆ. ಗೇರು ದಿನದ ಆಚರಣೆ ಬೆಳೆಗಾರರಿಗೆ ಮಾಹಿತಿಯ ಜೊತೆಗೆ ಸೂರ್ತಿ ನೀಡಲಿದೆ ಎಂದು ಹೇಳಿದರು.

ನಿರ್ದೇಶನಾಲಯದಲ್ಲಿ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನಗಳನ್ನು ರೈತರು ತಮ್ಮ ತೋಟಗಳಲ್ಲಿ ಅಳವಡಿಸಿದಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದು ಹೇಳಿದ ಅವರು, ಕೇರಳ ರಾಜ್ಯದಲ್ಲಿ ಸುಮಾರು 92 ಸಾವಿರ ಹೆಕ್ಟೇರ್ ಪ್ರದೇಶಗಳಲ್ಲಿ ಗೇರು ಬೆಳೆಯಲಾಗುತ್ತಿದೆ. ಗೇರು ಕಾರ್ಯಕ್ರಮಗಳ ಏಜೆನ್ಸಿ ಮೂಲಕ ಇದನ್ನು ಇನ್ನಷ್ಟು ವಿಸ್ತರಿಸುವ ಪ್ರಯತ್ನ ನಡೆಯುತ್ತಿದೆ. ಜಾಗತಿಕ ಮಟ್ಟದಲ್ಲಿ ಗೇರು ಉತ್ಪನ್ನಗಳಿಗೆ ಇರುವ ಬೇಡಿಕೆಗೆ ಸರಿದೂಗಿಸುವ ಮತ್ತು ಲಾಭ ಪಡೆಯುವ ದೃಷ್ಟಿಯಿಂದ ಭಾರತದಲ್ಲಿ ಇನ್ನಷ್ಟು ಗೇರು ಬೆಳೆಗೆ ಉತ್ತೇಜನ ಅಗತ್ಯವಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕೇರಳ ರಾಜ್ಯ ಗೇರು ಉತ್ತೇಜನ ಮಡಳಿಯ ಮುಖ್ಯಸ್ಥ ಶಿರಿಶ್ ಕುಮಾರ್ ಅವರು ಕಳೆದ 32 ವರ್ಷಗಳಿಂದ ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಅಭಿವೃದ್ಧಿಪಡಿಸಲಾದ ವಿವಿಧ ಗೇರು ತಳಿಗಳು ಮತ್ತು ತಂತ್ರಜ್ಞಾನಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕೇರಳದಲ್ಲಿ 800 ಗೇರು ಫ್ಯಾಕ್ಟರಿಗಳಿವೆ. 6 ಲಕ್ಷ ಮೆಟ್ರಿಕ್ ಟನ್ ಗೇರು ಬೀಜದ ಆವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಉತ್ಪಾದನೆಯಲ್ಲಿ ಹೆಚ್ಚಳಕ್ಕೆ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದರು.

ಇನ್ನೋರ್ವ ಅತಿಥಿ ಕಾಸರಗೋಡು ಸಿಪಿಸಿಆರ್‍ಐನ ಪ್ರಭಾರ ನಿರ್ದೇಶಕಿ ಡಾ. ಅನಿತಾ ಕರುಣ್ ಅವರು ಮಾತನಾಡಿ ತೋಟಗಾರಿಕಾ ಬೆಳೆಗಳ ಮಹತ್ವದ ಕುರಿತು ತಿಳಿಸಿದರು.

ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದ ಸಂಸ್ಥೆಯ ನಿರ್ದೇಶಕ ಡಾ. ಎಂ. ಜಿ. ನಾಯಕ್ ಅವರು ಗೇರು ನಿರ್ದೇಶನಾಲಯದ ಮೂಲಕ ಹೊಸ ತಳಿ, ವ್ಯವಸ್ಥೆಗಳನ್ನು ಜನರಿಗೆ ತಲುಪಸಲಾಗುತ್ತಿದೆ. 43 ತಳಿಗಳನ್ನು ಇಲ್ಲಿ ಅಭಿವೃದ್ಧಿಪಡಿಸಲಾಗಿದೆ. ನಿರ್ದೇಶನಾಲಯದಲ್ಲಿ ಗೇರು ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮೊಟ್ಟೆತ್ತಡ್ಕ ಗೇರು ನಿರ್ದೇಶನಾಲಯವು ಹೊರತಂದ ಗೇರು ಮರದಲ್ಲಿ ಹೂ, ಕಾಯಿ ಹಾಗೂ ಹಣ್ಣಾಗುವ ಹಂತಗಳ ಮಾಹಿತಿ ಇರುವ ಜಾಲತಾಣ ಹಾಗೂ ಗೇರು ಕೃಷಿ ಕುರಿತ `ಬೇಸಾಯದ ಬಗ್ಗೆ ಮಾಹಿತಿ' ಮತ್ತು ಕೊಯ್ಲೋತ್ತರ ತಂತ್ರಜ್ಞಾನ ಮಾಹಿತಿ' ಎಂಬ ಎರಡು ಲಘು ಗ್ರಂಥ ಮಾಲಿಕೆ ಗಳನ್ನು ಸಚಿವೆ ಜೆ. ಮರ್ಸಿಕುಟ್ಟಿ ಅಮ್ಮ ಲೋಕಾರ್ಪಣೆಗೊಳಿಸಿದರು ಬಳಿಕ ನಿರ್ದೇಶನಾಲಯದಲ್ಲಿ ಅಭಿವೃದ್ಧಿಪಡಿಸಲಾದ ಎಚ್ -130 ಹೈಬ್ರೀಡ್ ಗೇರು ಬೀಜ ತಳಿಯನ್ನು ರೈತರಿಗೆ ನೀಡುವ ಮೂಲಕ ಚಾಲನೆ ನೀಡಿದರು. ನೂತನ ಎಚ್-130 ಹೈಬ್ರಿಡ್ ತಳಿಯ 2 ಲಕ್ಷ ಗಿಡಗಳನ್ನು ಖರೀದಿಸುವುದಾಗಿ ಸಚಿವೆ ಜೆ. ಮರ್ಸಿಕುಟ್ಟಿ ಅಮ್ಮ ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಹಿರಿಯ ವಿಜ್ಞಾನಿ ಡಾ. ಜೆ. ದಿನಕರ್ ಅಡಿಗ ವಂದಿಸಿದರು. ಪ್ರಕಾಶ್ ಜಿ. ಭಟ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News