ಎಲ್ಲ ಬಂಗಾಳಿ ನಿರಾಶ್ರಿತರಿಗೆ ಭಾರತದ ನಾಗರಿಕತ್ವ: ಅಮಿತ್ ಶಾ

Update: 2019-01-22 17:04 GMT

ಮಾಲ್ಡಾ, ಜ. 22: ಪಶ್ಚಿಮಬಂಗಾಳದಲ್ಲಿ ಚುನಾವಣಾ ಪ್ರಚಾರ ಆರಂಭಿಸಿರುವ ಬಿಜೆಪಿ ವರಿಷ್ಠ ಅಮಿತ್ ಶಾ, ನಾಗರಿಕತ್ವ ಮಸೂದೆ ಅಡಿ ಎಲ್ಲ ಬಂಗಾಳಿ ನಿರಾಶ್ರಿತರಿಗೆ ನಾಗರಿಕತ್ವ ನೀಡಲಾಗುವುದು ಎಂದಿದ್ದಾರೆ.

ಮಾಲ್ಡಾದಲ್ಲಿ ರ್ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ ತೃಣಮೂಲ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಪ್ರಜಾಪ್ರಭುತ್ವ ಮರು ಸ್ಥಾಪನೆಯಾಗಲಿದೆ ಎಂದು ಅವರು ಹೇಳಿದರು. ನಾಗರಿಕತ್ವ ಮಸೂದೆ ಅಡಿಯಲ್ಲಿ ಎಲ್ಲಾ ಬಂಗಾಳಿ ನಿರಾಶ್ರಿತರಿಗೆ ನಾಗರಿಕತ್ವ ನೀಡಲಾಗುವುದು ಎಂದು ಭರವಸೆ ನೀಡಲು ನಾನು ಬಯಸುತ್ತೇನೆ. ನಿರಾಶ್ರಿತರಿಗಾಗಿ ತೃಣಮೂಲ ಕಾಂಗ್ರೆಸ್ ಸರಕಾರ ಏನನ್ನೂ ಮಾಡಿಲ್ಲ. ಆದರೆ, ನಾವು ನಿಮಗೆ ನಾಗರಿಕತ್ವ ನೀಡುತ್ತೇವೆ ಎಂದು ಅವರು ಹೇಳಿದರು.

ಕೊಲ್ಕತ್ತಾದಲ್ಲಿ ನಡೆದ ಪ್ರತಿಪಕ್ಷಗಳ ಬಗ್ಗೆ ರ್ಯಾಲಿಯಲ್ಲಿ ವ್ಯಂಗ್ಯವಾಡಿದ ಅವರು, ಸಾರ್ವಜನಿಕ ಸಭೆಯಲ್ಲಿ ಪ್ರತಿಪಕ್ಷಗಳು ಒಂದು ಬಾರಿ ಕೂಡ ‘ಭಾರತ್ ಮಾತಾ ಕಿ ಜೈ’ ಅಥವಾ ‘ವಂದೇ ಮಾತರಂ’ ಘೋಷಣೆ ಕೂಗಿಲ್ಲ. ಆದರೆ, ‘ಮೋದಿ, ಮೋದಿ’ ನಿರಂತರ ಪಠಿಸಿದ್ದಾರೆ ಎಂದರು. ಪ್ರತಿಪಕ್ಷಗಳ ‘ಮಹಾಘಟಬಂಧನ’ ಅಧಿಕಾರ ಪಡೆಯುವ ಹಾಗೂ ವೈಯುಕ್ತಿಕ ಹಿತಾಸಕ್ತಿ ಈಡೇರಿಸಿಕೊಳ್ಳುವ ಉದ್ದೇಶ ಹೊಂದಿದೆ ಎಂದರು. ಮಹಾಘಟಬಂಧನ ದುರಾಸೆಯಿಂದ ಕೂಡಿದೆ. ಅವರು ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಲು ಬಯಸುತ್ತಿದ್ದಾರೆ. ಆದರೆ, ನಾವು ಬಡತನ ಹಾಗೂ ಭ್ರಷ್ಟಾಚಾರ ಹೊಡೆದೋಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಶಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News