ಭಟ್ಕಳ: ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ

Update: 2019-01-22 18:34 GMT

ಭಟ್ಕಳ, ಜ. 22: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಭಟ್ಕಳ-ಹೊನ್ನಾವರ ಇದರ ಬೆಳಕೆ, ಹಡೀನ, ಹೇರೂರು ಪ್ರಗತಿ ಬಂಧು, ಸ್ವ ಸಹಾಯ ಸಂಘಗಳ ಅಡಿಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಬೆಳಕೆ, ಸೋಡಿಗದ್ದೆಯ ಆವರಣದಲ್ಲಿ ನಡೆಯಿತು. 

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ನ್ಯಾಯವಾದಿ ಹಾಗೂ ಸೋಡಿಗದ್ದೆ ಶ್ರೀ ಮಹಾಸತಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಾಗರಾಜ  ಮಾತನಾಡಿ ನಾವು ನಮ್ಮ ಧಾರ್ಮಿಕ ಕಟ್ಟುಕಟ್ಟಲೆಗಳನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನ್ಯಾಯವಾದಿ ಎಂ.ಜೆ.ನಾಯ್ಕ ಅವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಇಂದು ತಾಯಂದಿರು ಬ್ಯಾಂಕಿಂಗ್ ವ್ಯವಹಾರದ ಜೊತೆಗೆ ದೈನಂದಿನ ವ್ಯವಹಾರಗಳನ್ನು ಕಲಿತು ಕುಟುಂಬ ನಿರ್ವಹಣೆಯ ಜವಾಬ್ದಾರಿಯನ್ನು ಸಮರ್ಥ ವಾಗಿ ನಿರ್ವಹಿಸಿಕೊಂಡು ಹೋಗಲು ಶಕ್ತರಾಗಿದ್ದಾರೆ ಎಂದರು. ಮಕ್ಕಳಿಗೆ ತಾಯಂದಿರು ಸಂಸ್ಕಾರವನ್ನು ನೀಡಿ ಅವರು ಮುಂದಿನ ಉತ್ತಮ ಪ್ರಜೆಗಳಾಗವಂತೆ ಮಾಡುವ ಜವಾಬ್ದಾರಿ ತಾಯಂದಿರ ಮೇಲಿದೆ ಎಂದೂ ಹೇಳಿದರು.  

ಕಾರ್ಯಕ್ರಮದಲ್ಲಿ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಭಾಸ್ಕರ ನಾಯ್ಕ ಅವರು ಧಾರ್ಮಿಕ ಉಪನ್ಯಾಸ ನೀಡಿದರು. 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಯೋಜನೆಯ ಜಿಲ್ಲಾ ನಿರ್ದೇಶಕ ಶಂಕರ ಶೆಟ್ಟಿ ಎಂ,  ಭಟ್ಕಳ-ಹೊನ್ನಾವರ ಯೋಜನಾಧಿಕಾರಿ ಎಂ. ಎಸ್. ಈಶ್ವರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯಲ್ಲಿಯೇ ಭಟ್ಕಳ ಮತ್ತು ಹೊನ್ನಾವರ ಸಂಘಗಳು ಮಾದರಿಯಾಗಿ ಕೆಲಸ ಮಾಡುತ್ತಿದ್ದು ಸಾಲ ಮರುಪಾವತಿಯಲ್ಲಿಯೂ ಕೂಡಾ ಮುಂದೆ ಇದ್ದಾರೆ. ಈ ಸಂಘಗಳು ನಮ್ಮ ಉಳಿದ ಎಲ್ಲಾ ಸಂಘಗಳಿಗೆ ಮಾದರಿಯಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಯಲ್ವಡಿಕವೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶೀಲಾ ನಾಯ್ಕ, ಊರಿನ ಹಿರಿಯರಾದ ಈರಪ್ಪ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

ಮೇಲ್ವಿಚಾರಕಿ ರೇಷ್ಮಾ ಅವರು ಸ್ವಾಗತಿಸಿದರು. ಒಕ್ಕೂಟದ ಕಾರ್ಯದರ್ಶಿ ಪದ್ಮಶ್ರೀ ನಿರೂಪಿಸಿದರು. ಸೇವಾಪ್ರತಿನಿಧಿ ಆರತಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News