ಮಂಗನಕಾಯಿಲೆ ಮಾನವನಿಂದ ಇನ್ನೊಬ್ಬರಿಗೆ ಹರಡುವುದಿಲ್ಲ, ಗಾಬರಿ ಬೇಡ: ಜಿಲ್ಲಾಧಿಕಾರಿ

Update: 2019-01-23 11:54 GMT

ಮಂಗಳೂರು, ಜ.23: ದ.ಕ. ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಮಂಗನಕಾಯಿಲೆ ಪ್ರಕರಣಗಳು ವರದಿಯಾಗಿಲ್ಲ. ಆದರೆ ಇತ್ತೀಚೆಗೆ ಬೆಳ್ತಂಗಡಿ ವ್ಯಾಪ್ತಿಯಲ್ಲಿ ಪತ್ತೆಯಾಗಿರುವ ಮಂಗಗಳ ಕಳೇಬರ ಮತ್ತು ಅಲ್ಲಿಂದ ಸಂಗ್ರಹಿಸಲಾದ ಉಣ್ಣಿಯನ್ನು ಬಯಾಪ್ಸಿ ಪರೀಕ್ಷೆಗಾಗಿ ಪುಣೆಯ ಪ್ರಯೋಗಾಲಯಕ್ಕೆ ಕಳಹಿಸಲಾಗಿದೆ. ಅದರ ಫಲಿತಾಂಶ ಇನ್ನೂ ಬಂದಿಲ್ಲ. ಆದಾಗ್ಯೂ ಜಿಲ್ಲೆಯ ಜನತೆ ಯಾವುದೇ ಕಾರಣಕ್ಕೂ ಗಾಬರಿಗೊಳಗಾಗಬೇಕಿಲ್ಲ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ

ದ.ಕ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗನಕಾಯಿಲೆ ಮನುಷ್ಯನಿಂದ ಮನುಷ್ಯನಿಗೆ ಹರಡುವ ಸಾಂಕ್ರಾಮಿಕ ರೋಗವಲ್ಲ. ಆದರೆ ಸೋಂಕಿತ ಮಂಗನ ಮೈಯಿಂದ ಹರಡುವ ಉಣ್ಣಿಗಳು ಕಾಡಿಗೆ ತೆರಳುವ ಜನರ ಸಂಪರ್ಕಕ್ಕೊಳಗಾದರೆ ಇದು ಹರಡುವ ಸಾಧ್ಯತೆ ಇದೆ. ಹಾಗಾಗಿ ಕಾಡಿಗೆ ಹೋಗುವವರು ಮೈಗೆ ಹಚ್ಚಿಕೊಳ್ಳಲು ನಿಗದಿತ ಅರಣ್ಯದ ಗಡಿ ಭಾಗಗಳಲ್ಲಿನ ಜನರಿಗಾಗಿ 300 ಬಾಟಲಿ ಡಿಎಂಪಿ ತೈಲ ಹಾಗೂ ಕರಪತ್ರ ಹಂಚಲಾಗಿದೆ ಎಂದರು.

ಮಂಗಗಳಲ್ಲಿರುವ ಉಣ್ಣಿಗಳ ಮುಖಾಂತರ ದನ ಕರು ಅಥವಾ ಮನುಷ್ಯರಿಗೆ ಮಂಗನಕಾಯಿಲೆ ಹರಡುತ್ತದೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ದನಕರುಗಳ ತಪಾಸಣೆ ಮಾಡಿಸಬೇಕು. ಉದ್ದ ತೋಳಿನ ಅಂಗಿಗಳ ಬಳಕೆ, ಡಿಎಂಪಿ ತೈಲವನ್ನು ಮೈಗೆ ಹಚ್ಚಿಕೊಳ್ಳಬೇಕು ಎಂದ ಜಿಲ್ಲಾಧಿಕಾರಿ, ಯಾವುದೇ ಕಾರಣಕ್ಕೂ ಗಾಬರಿಗೊಳಗಾಗದೆ ಜಿಲ್ಲಾಡಳಿತಕ್ಕೆ ಸಕಾಲಕ್ಕೆ ಮಾಹಿತಿ ನೀಡಿ ಸಹಕರಿಸಬೇಕು ಎಂದರು.

*ಮಂಗಗಳನ್ನು ಸುಟ್ಟುಹಾಕದಿರಿ: ಈ ಸಂದರ್ಭ ಮಾತನಾಡಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಕೃಷ್ಣ ರಾವ್, ಮಂಗಗಳ ಕಳೇಬರ ಕಂಡ ತಕ್ಷಣ ಅವುಗಳನ್ನು ಸುಡದೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಹಾಗೂ ಮನೆಯ ಸಾಕುಪ್ರಾಣಿಗಳಲ್ಲಿ ಉಣ್ಣಿಗಳು ಕಂಡು ಬಂದರೆ ತಪಾಸಣೆಗೊಳಪಡಿಸಬೇಕು ಎಂದು ಹೇಳಿದರು. ಪುತ್ತೂರಿನ ಕಡಬ ಕುಂಟಾಡಿ, ಬೆಳ್ತಂಗಡಿಯ ಪಡಂಗಡಿ ಕಣ್ಣಾಜೆ, ಉಜಿರೆಯ ಅತಾಜೆಯಿಂದ ಉಣ್ಣಿಗಳ ಮಾದರಿ ಸಂಗ್ರಹಿಸಿ ಅವುಗಳನ್ನು ತಪಾಸಣೆಗೆ ಕಳುಹಿಸಲಾಗಿದೆ. ಕೊಯ್ಲ, ಕಾಣಿಯೂರಿನಿಂದ ಸಂಗ್ರಹಿಸಲಾಗಿದ್ದು, ಅವುಗಳನ್ನು ಇನ್ನಷ್ಟೇ ಪರೀಕ್ಷೆಗೆ ಕಳುಹಿಸಬೇಕಾಗಿದೆ ಎಂದರು.

ಜಿಲ್ಲೆಯಲ್ಲಿ ಈವರೆಗೆ 9 ಮಂಗಗಳು ಸಾವನ್ನಪ್ಪಿವೆ. ಇವೆಲ್ಲವೂ ಮಂಗನಕಾಯಿಲೆಯಿಂದ ಸತ್ತಿದ್ದು ಎನ್ನಲು ಸಾಧ್ಯವಿಲ್ಲ. ಕಳೇಬರ ಮತ್ತು ಉಣ್ಣಿಯನ್ನು ಬಯಾಪ್ಸಿ ಪರೀಕ್ಷೆಗಾಗಿ ಕಳುಹಿಸಿರುವ ಮಾದರಿಯ ವರದಿ ಬಂದ ಬಳಿಕವಷ್ಟೇ ನಿಖರ ಕಾರಣ ತಿಳಿಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಕುಮಾರ್ ಉಪಸ್ಥಿತರಿದ್ದರು.


ರೋಗದ ಲಕ್ಷಣಗಳು
*ವಿಪರೀತ ಜ್ವರ, ತಲೆ, ಕೈಕಾಲು ನೋವು, ಸೊಂಟ ನೋವು, ನಿಶ್ಯಕ್ತಿ, ಕಣ್ಣು ಕೆಂಪಾಗುವುದು, ಮೂಗು, ಬಾಯಿ, ಗುದದ್ವಾರದಿಂದ ರಕ್ತಸ್ರಾವ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News