ಪ್ರಿಯಾಂಕಾ ರಾಜಕೀಯ ಪ್ರವೇಶ: ಬದಲಾಗಲಿದೆ ಉ.ಪ್ರದೇಶದ ಚುನಾವಣಾ ಲೆಕ್ಕಾಚಾರ

Update: 2019-01-23 16:14 GMT

ಹೊಸದಿಲ್ಲಿ, ಜ.23: ಮಾಯಾವತಿಯವರ ಬಿಎಸ್‌ಪಿಯೊಂದಿಗೆ ಮೈತ್ರಿಯನ್ನು ಮಾಡಿಕೊಳ್ಳುವ ಮೂಲಕ ಉತ್ತರ ಪ್ರದೇಶದ ಚುನಾವಣಾ ಲೆಕ್ಕಾಚಾರವನ್ನು ‘ಸರಿಪಡಿಸುವುದು’ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಕನಸು. ಆದರೆ ಅವರು ಕಾಂಗ್ರೆಸ್ ಪಕ್ಷವನ್ನು ಮೈತ್ರಿಯಿಂದ ಹೊರಗಿರಿಸಿರುವುದು ಬಿಜೆಪಿಯನ್ನು ಸಂಭಾವ್ಯ ಭಾರೀ ಸೋಲಿನಿಂದ ಪಾರು ಮಾಡಿರುವಂತಿದೆ.

 ಉತ್ತರ ಪ್ರದೇಶದಲ್ಲಿಯ ಇಂದಿನ ರಾಜಕೀಯ ಸನ್ನಿವೇಶದಲ್ಲಿ 2014ರ ಲೋಕಸಭಾ ಚುನಾವಣಾ ಫಲಿತಾಂಶಗಳನ್ನು ಪರಿಗಣಿಸಿದರೆ ಎಸ್‌ಪಿ-ಬಿಎಸ್‌ಪಿ-ಕಾಂಗ್ರೆಸ್ ಮೈತ್ರಿಕೂಟದ ಎದುರು ಬಿಜೆಪಿಯ ಗಳಿಕೆ 20 ಸ್ಥಾನಗಳಿಗೆ ಕುಗ್ಗಲಿದೆ. 2014ರಲ್ಲಿ ರಾಜ್ಯದ 80 ಸ್ಥಾನಗಳ ಪೈಕಿ 71 ಸ್ಥಾನಗಳನ್ನು ಅದು ಗೆದ್ದಿತ್ತು. ಈ 20 ಸ್ಥಾನಗಳಲ್ಲಿಯೂ ಅದು ಈಗಾಗಲೇ ಮಾರ್ಚ್, 2018ರ ಉಪಚುನಾವಣೆಯಲ್ಲಿ ಎಸ್‌ಪಿ-ಬಿಎಸ್‌ಪಿ-ಕಾಂಗ್ರೆಸ್ ಮೈತ್ರಿಕೂಟದೆದುರು ಫೂಲಪುರ ಮತ್ತು ಗೋರಖ್‌ಪುರ ಲೋಕಸಭಾ ಕ್ಷೇತ್ರಗಳನ್ನು ಕಳೆದುಕೊಂಡಿದೆ.

ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟದಿಂದ ಕಾಂಗ್ರೆಸ್ ಹೊರಗುಳಿದರೆ ಮತ್ತು ತ್ರಿಕೋನ ಸ್ಪರ್ಧೆ ಏರ್ಪಟ್ಟರೆ ಬಿಜೆಪಿಯು ಮುಂಬರುವ ಚುನಾವಣೆಯಲ್ಲಿ 38 ಸ್ಥಾನಗಳನ್ನು ಗೆಲ್ಲಲಿದೆ,ಅಂದರೆ ಅದು 33 ಸ್ಥಾನಗಳನ್ನು ಕಳೆದುಕೊಳ್ಳಲಿದೆ.

ಬಿಜೆಪಿ ಈಗಲೂ ಪ್ರಬಲವಾಗಿರುವಂತೆ ಕಂಡು ಬರುತ್ತಿರುವ ಲೋಕಸಭಾ ಕ್ಷೇತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಾರಣಾಸಿ ಕ್ಷೇತ್ರವು ಸೇರಿದೆ. ಕೈರಾನಾ,ಮುಝಫ್ಫರ್‌ನಗರ,ಮಥುರಾ,ಆಗ್ರಾ ಲಕ್ನೋ,ಕಾನ್ಪುರ,ಬರೇಲಿ ಮತ್ತು ದೇವರಿಯಾ ಇವು ಯಾವುದೇ ಪ್ರತಿಪಕ್ಷ ಮೈತ್ರಿಯ ಎದುರೂ ಬಿಜೆಪಿ ಉಳಿಸಿಕೊಳ್ಳುವ ಸಾಧ್ಯತೆಯಿರುವ ಇತರ ಕ್ಷೇತ್ರಗಳಾಗಿವೆ.

ಎಸ್‌ಪಿ-ಬಿಎಸ್‌ಪಿ ಮೈತ್ರಿಯ ಬಳಿಕ ಈಗ ಪೂರ್ವ ಉತ್ತರ ಪ್ರದೇಶದಲ್ಲಿ ತನ್ನ ಪಕ್ಷದ ಚುನಾವಣಾ ಪ್ರಚಾರ ಅಭಿಯಾನದ ಉಸ್ತುವಾರಿಯಾಗಿ ಪ್ರಿಯಾಂಕಾ ಗಾಂಧಿಯವರ ರಾಜಕೀಯ ಪ್ರವೇಶವು ಬಿಜೆಪಿಯ ತಲೆನೋವನ್ನು ಹೆಚ್ಚಿಸಿದೆ.

  ಕಾಂಗ್ರೆಸ್‌ನ ‘ಟ್ರಂಪ್ ಕಾರ್ಡ್’ ಎಂದು ಬಿಂಬಿಸಲಾಗಿರುವ ಪ್ರಿಯಾಂಕಾ ತನ್ನ ಕುಟುಂಬದ ಕ್ಷೇತ್ರಗಳಾಗಿರುವ ಅಮೇಥಿ ಮತ್ತು ರಾಯಬರೇಲಿಗಳಿಗಷ್ಟೇ ಸೀಮಿತವಾಗಿರುವುದಿಲ್ಲ. ಅವರು ಅಮೇಥಿಯಿಂದ ವಾರಣಾಸಿಯವರೆಗೆ 24 ಜಿಲ್ಲೆಗಳನ್ನೊಳಗೊಂಡಿರುವ ಇಡೀ ಪೂರ್ವಾಂಚಲದಲ್ಲಿ ಪ್ರಚಾರದ ನೇತೃತ್ವವನ್ನು ವಹಿಸಲಿದ್ದಾರೆ.

ಮಧ್ಯಪ್ರದೇಶದಲ್ಲಿ ಪಕ್ಷದ ಗೆಲುವಿನ ಹೆಗ್ಗಳಿಕೆಯಿಂದ ಬೀಗುತ್ತಿರುವ ಜ್ಯೋತಿರಾದಿತ್ಯ ಸಿಂಧಿಯಾರನ್ನು ಸಹ ಪಶ್ಚಿಮ ಉತ್ತರ ಪ್ರದೇಶದ ಉಸ್ತುವಾರಿಯನ್ನಾಗಿ ನೇಮಕಗೊಳಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿಗೆ ಸಡ್ಡು ಹೊಡೆಯುವ ತನ್ನ ಉದ್ದೇಶವನ್ನು ಕಾಂಗ್ರೆಸ್ ಘೋಷಿಸಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಖಿಲೇಶ್ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರು. ಆದರೆ ಬಿಜೆಪಿಯು ಜಯಭೇರಿ ಬಾರಿಸುವ ಮೂಲಕ ಈ ಮೈತ್ರಿ ಉಭಯ ಪಕ್ಷಗಳಿಗೂ ವೈಫಲ್ಯವನ್ನುಂಟು ಮಾಡಿತ್ತು.

ಈ ಹಂತದಲ್ಲಿ ಪ್ರಿಯಾಂಕಾರ ಪ್ರವೇಶವು ಉತ್ತರ ಪ್ರದೇಶದ ಚುನಾವಣಾ ಲೆಕ್ಕಾಚಾರವನ್ನು ಮತ್ತೊಮ್ಮೆ ಬದಲಿಸಬಲ್ಲದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News