ಸಿಎ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ ಶದಾಬ್ ಹುಸೈನ್

Update: 2019-01-23 16:38 GMT

ಹೊಸದಿಲ್ಲಿ, ಜ.23: ಈ ಬಾರಿಯ ಚಾರ್ಟರ್ಡ್ ಅಕೌಂಟಂಟ್ಸ್ (ಸಿಎ) ಅಂತಿಮ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ರಾಜಸ್ಥಾನದ ಕೋಟಾ ನಿವಾಸಿ ಶದಾಬ್ ಹುಸೈನ್  ಟಾಪರ್ ಆಗಿ ಹೊರಹೊಮ್ಮಿದ್ದಾರೆ. 800ರಲ್ಲಿ 597 ಅಂಕಗಳನ್ನು ಗಳಿಸಿರುವ ಹುಸೈನ್ 74.63 ಶೇ. ಫಲಿತಾಂಶ ದಾಖಲಿಸಿದ್ದಾರೆ.

ಕೋಟಾ ವಿವಿಯಲ್ಲಿ ಹುಸೈನ್ ಬಿಕಾಂ ಪದವಿ ಪಡೆದಿದ್ದು, ಅವರ ತಂದೆ ಟೈಲರ್ ಆಗಿ ಕೆಲಸ ಮಾಡುತ್ತಿದ್ದಾರೆ. ಹುಸೈನ್ ರ ತಾಯಿ ಗೃಹಿಣಿಯಾಗಿದ್ದು, ಅವರಿಗೆ ನಾಲ್ವರು ಸಹೋದರಿಯರಿದ್ದಾರೆ. ತಮಗೆ ಹೆಚ್ಚು ವಿದ್ಯಾಭ್ಯಾಸವಿಲ್ಲದಿದ್ದರೂ ತಂದೆ ತಾಯಿ ಹುಸೈನ್ ರನ್ನು ಕಷ್ಟಪಟ್ಟು ಓದಿಸಿದರು.

“ಕೆಲಸ ಗಿಟ್ಟಿಸಿಕೊಳ್ಳುವ ಸಲುವಾಗಿ ನಾನು ಹಗಲು-ರಾತ್ರಿ ಕಷ್ಟಪಟ್ಟು ಓದಿದೆ. ನನಗೆ ಕೆಲಸ ಸಿಕ್ಕರೆ ತಂದೆ ತಾಯಿ ಅವರ ವೃದ್ಧಾಪ್ಯದ ದಿನಗಳ ಬಗ್ಗೆ ಚಿಂತೆ ಮಾಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ” ಎಂದು ಹುಸೈನ್ ಹೇಳುತ್ತಾರೆ.

23 ವರ್ಷದ ಈ ಯುವಕ ಪ್ರತಿದಿನ 13ರಿಂದ 14 ಗಂಟೆಗಳನ್ನು ಸ್ವಯಂ ಕಲಿಕೆಗಾಗಿ ಮೀಸಲಿಟ್ಟಿದ್ದರು. ತಾನು ಟಾಪ್ ಸ್ಕೋರರ್ ಗಳಲ್ಲಿ ಒಬ್ಬನಾಗಬೇಕೆನ್ನುವುದು ಅವರ ಆಸೆಯಾಗಿತ್ತು. “ನನ್ನ ಕುಟುಂಬದಲ್ಲೇ ಇದು ದೊಡ್ಡ ಸಾಧನೆ. ಐಪಿಸಿಸಿ ಪರೀಕ್ಷೆಯಲ್ಲಿ ಟಾಪರ್ ಆದಂದಿನಿಂದಲೂ ನಾನು ಟಾಪರ್ ಆಗಲು ಬಯಸಿದ್ದೆ” ಎಂದವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News