178 ಯೂನಿಟ್ ಗೆ 23 ಕೋಟಿ ರೂ.: ವಿದ್ಯುತ್ ಬಿಲ್ ಮೊತ್ತ ಕಂಡು ಹೌಹಾರಿದ ವ್ಯಕ್ತಿ!

Update: 2019-01-23 16:43 GMT

ಕನೌಜ್, ಜ.23: ಉತ್ತರ ಪ್ರದೇಶದ ಕನೌಜ್ ನಿವಾಸಿ ಅಬ್ದುಲ್ ಬಾಸಿತ್ ಎಂಬವರಿಗೆ ಇತ್ತೀಚೆಗೆ ವಿದ್ಯುತ್ ಬಿಲ್ ಬಂದಾಗ ದೊಡ್ಡ ಆಘಾತವೇ ಕಾದಿತ್ತು. ಸಾಮಾನ್ಯ ಮನೆಗೆ ನೀಡಲಾಗುವ 2 ಕೆವಿ ವಿದ್ಯುತ್ ಸಂಪರ್ಕ ಹೊಂದಿದ್ದ ಅವರ ಮನೆಯ ವಿದ್ಯುತ್ ಬಿಲ್ ಮೊತ್ತ ಬರೋಬ್ಬರಿ ರೂ 23 ಕೋಟಿಯಾಗಿತ್ತು.

ಇಡೀ ಉತ್ತರ ಪ್ರದೇಶದ ವಿದ್ಯುತ್ ಬಿಲ್ ಅನ್ನೇ ತನ್ನ ಬಿಲ್ ನಲ್ಲಿ ತೋರಿಸಲಾಗಿದೆಯೇನೋ ಎಂದು ಅಬ್ದುಲ್ ಬಾಸಿತ್ ಅಚ್ಚರಿ ವ್ಯಕ್ತ ಪಡಿಸುತ್ತಾರೆ. ಅವರ ವಿದ್ಯುತ್ ಬಿಲ್ ನ ನಿಖರ ಮೊತ್ತ ರೂ 23,67,71,524 ಆಗಿತ್ತು. ಬಳಸಲಾದ ವಿದ್ಯುತ್ ಯೂನಿಟ್ ಗಳು ಕೇವಲ 178 ಎಂದೂ ನಮೂದಿತವಾಗಿತ್ತು.

“ನನ್ನ ಇಡೀ ಜೀವಮಾನ ದುಡಿದರೂ ಈ ಬಿಲ್ ಮೊತ್ತ ಪಾವತಿಸಲು ನನ್ನಿಂದ ಸಾಧ್ಯವಿಲ್ಲ'' ಎಂದು ಉದ್ಘರಿಸುವ ಅವರು ಬಿಲ್ ಸರಿ ಪಡಿಸಲು ವಿದ್ಯುತ್ ಇಲಾಖೆಯ ಕಚೇರಿಗೆ ಅಲೆದಾಡುತ್ತಿದ್ದಾರೆ.

ಈ ಪ್ರಮಾದದ ಬಗ್ಗೆ ಮಾತನಾಡಿದ ವಿದ್ಯುತ್ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಶದಬ್ ಅಹ್ಮದ್, “ಬಿಲ್ ಸರಿ ಪಡಿಸಿದ ನಂತರವಷ್ಟೇ ಗ್ರಾಹಕನಿಂದ ಹಣ ಪಡೆಯಲಾಗುವುದು, ಕೆಲವೊಮ್ಮೆ ಕೆಲವೊಂದು ತಾಂತ್ರಿಕ ದೋಷಗಳಿಂದ ಇಂತಹ ಪ್ರಮಾದ ನಡೆಯುತ್ತದೆ. ಮತ್ತೊಮ್ಮೆ ಮೀಟರ್ ರೀಡಿಂಗ್ ನಡೆಸಲಾಗುವುದು'' ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News