ಭಾರತೀಯ ಮನೆಗೆಲಸದಾಳುಗಳ ಸುರಕ್ಷತೆಗಾಗಿ ಕುವೈತ್ ಜೊತೆ ಒಪ್ಪಂದಕ್ಕೆ ಸಂಪುಟದ ಒಪ್ಪಿಗೆ

Update: 2019-01-23 17:40 GMT

ಹೊಸದಿಲ್ಲಿ, ಜ.23: ಕುವೈತ್‌ನಲ್ಲಿ ಮನೆಗೆಲಸದ ನೌಕರರಾಗಿ ದುಡಿಯುತ್ತಿರುವ ಮೂರು ಲಕ್ಷ ಭಾರತೀಯರ ಸುರಕ್ಷತೆಗಾಗಿ ಆ ರಾಷ್ಟ್ರದ ಜೊತೆ ಒಪ್ಪಂದವೊಂದಕ್ಕೆ ಸಹಿ ಹಾಕಲು ಕೇಂದ್ರ ಸಂಪುಟವು ಬುಧವಾರ ಒಪ್ಪಿಗೆಯನ್ನು ನೀಡಿದೆ.

ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ವಿವರಗಳನ್ನು ಸುದ್ದಿಗಾರರಿಗೆ ನೀಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು,90,000 ಮಹಿಳೆಯರೂ ಸೇರಿದಂತೆ ಕುವೈತ್‌ನಲ್ಲಿ ಮನೆಗೆಲಸದಾಳುಗಳಾಗಿ ದುಡಿಯುತ್ತ್ತಿರುವ ಭಾರತೀಯರ ಸುರಕ್ಷತೆ,ಭದ್ರತೆ,ಸೇವಾಸ್ಥಿತಿಗಳನ್ನು ಖಚಿತಪಡಿಸುವಲ್ಲಿ ಈ ಒಪ್ಪಂದವು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.

ಕುವೈತ್‌ನಲ್ಲಿ ಒಂಭತ್ತು ಲಕ್ಷ ಭಾರತೀಯರಿದ್ದು,ಅವರಲ್ಲಿ ಮೂರು ಲಕ್ಷ ಜನರು ಮನೆಗೆಲಸದಾಳುಗಳಾಗಿ ದುಡಿಯುತ್ತಿದ್ದಾರೆ. ಒಪ್ಪಂದವು ಆರಂಭದಲ್ಲಿ ಐದು ವರ್ಷಗಳ ಅವಧಿಗೆ ಊರ್ಜಿತದಲ್ಲಿರುತ್ತದೆ ಮತ್ತು ಬಳಿಕ ಸ್ವಯಂ ನವೀಕರಣಗೊಳ್ಳುತ್ತದೆ.

ಸೌದಿ ಅರೇಬಿಯಾ,ಒಮನ್ ಮತ್ತು ಕತರ್ ಸೇರಿದಂತೆ ಕೊಲ್ಲಿ ಸಹಕಾರ ಮಂಡಳಿ ರಾಷ್ಟ್ರಗಳಲ್ಲಿ 90 ಲಕ್ಷಕ್ಕೂ ಅಧಿಕ ಭಾರತೀಯರು ವಾಸವಾಗಿದ್ದಾರೆ ಎಂದೂ ಪ್ರಸಾದ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News