ಎಸ್ಪಿ, ಬಿಎಸ್ಪಿ ಮತ್ತು ಕಾಂಗ್ರೆಸ್ ಒಂದಾದರೆ ಉ.ಪ್ರದೇಶದಲ್ಲಿ ಬಿಜೆಪಿಗೆ ಕೇವಲ ಐದು ಸ್ಥಾನ!

Update: 2019-01-23 18:08 GMT

ಹೊಸದಿಲ್ಲಿ, ಜ.23: ಮುಂಬರುವ ಲೋಕಸಭಾ ಚುನಾವಣೆಗೆ ತಮ್ಮ ಚುನಾವಣಾಪೂರ್ವ ಮೈತ್ರಿಯಿಂದ ಕಾಂಗ್ರೆಸ್ ಪಕ್ಷವನ್ನು ಹೊರಗಿಡುವ ಮೂಲಕ ಎಸ್ಪಿ ಮತ್ತು ಬಿಎಸ್ಪಿ ಮಹಾ ಪ್ರಮಾದವನ್ನೆಸಗಿವೆ ಎಂದು ಇಂಡಿಯಾ ಟುಡೇ-ಕಾರ್ವಿ ಇನ್ಸೈಟ್ಸ್ ನಡೆಸಿರುವ ಮೂಡ್ ಆಫ್ ದಿ ನೇಷನ್ ಜನಾಭಿಪ್ರಾಯ ಸಂಗ್ರಹದ ಫಲಿತಾಂಶಗಳು ಬೆಟ್ಟು ಮಾಡಿವೆ.

ಎಸ್ಪಿ, ಬಿಎಸ್ಪಿ, ಕಾಂಗ್ರೆಸ್, ಆರ್ಎಲ್ಡಿ ಮತ್ತು ಇತರ ಪಕ್ಷಗಳು ಒಂದಾಗಿ ಬಿಜೆಪಿಯ ವಿರುದ್ಧ ಹೋರಾಡಿದರೆ ಅದು ಬಿಜೆಪಿಗೆ ಬಲವಾದ ಹೊಡೆತವನ್ನು ನೀಡುತ್ತಿತ್ತು ಎಂದು ಈ ಸಮೀಕ್ಷೆಯು ತೋರಿಸಿದೆ.
ಈ ಪಕ್ಷಗಳು ಬಿಜೆಪಿ ವಿರುದ್ಧ ಒಂದಾಗಿ ಹೋರಾಡಿದರೆ ಅವುಗಳ ಗಳಿಕೆ 2014ರಲ್ಲಿಯ ಜುಜುಬಿ ಐದರಿಂದ ಈ ಬಾರಿ 75ಕ್ಕೇರುತ್ತಿತ್ತು ಎಂದೂ ಅದು ತಿಳಿಸಿದೆ.
ಉ.ಪ್ರದೇಶದ ಒಟ್ಟು 2,478 ಜನರನ್ನು ಸಮೀಕ್ಷೆಗೊಳಪಡಿಸಲಾಗಿತ್ತು. ಮೂಡ್ ಆಫ್ ದಿ ನೇಷನ್ ದೇಶದ ರಾಜಕೀಯ ನಾಡಿಮಿಡಿತವನ್ನು ಕಂಡುಕೊಳ್ಳಲು ನಡೆಸಲಾಗುವ ಅತ್ಯಂತ ದೊಡ್ಡ ಜನಾಭಿಪ್ರಾಯ ಸಂಗ್ರಹಗಳಲ್ಲೊಂದಾಗಿದೆ.

ಉ.ಪ್ರದೇಶವು ದೇಶದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆ(80)ಯಲ್ಲಿ ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷ ಅಪ್ನಾ ದಳ ಒಟ್ಟು 73 ಸ್ಥಾನಗಳನ್ನು ಗೆದ್ದಿದ್ದವು. ಅವುಗಳ ಒಟ್ಟು ಮತಗಳ ಪಾಲು ಶೇ.43.3 ಆಗಿತ್ತು. ಸಮೀಕ್ಷೆಯು ಕಂಡುಕೊಂಡಿರುವ ಉತ್ತರ ಪ್ರದೇಶದ ಜನರ ಹಾಲಿ ಮನೋಸ್ಥಿತಿಯಂತೆ ಮೇಲೆ ಹೇಳಿದ ಎಲ್ಲ ಪಕ್ಷಗಳು ಒಂದಾಗಿ ಹೋರಾಡಿದರೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ-ಅಪ್ನಾದಳ ಗಳಿಕೆ 73ರಿಂದ 5ಕ್ಕೆ, ಅಂದರೆ ಶೇ.93ರಷ್ಟು ಕುಸಿಯಲಿದೆ. ಅವುಗಳ ಮತಗಳಿಕೆಯೂ 2014ರಲ್ಲಿಯ ಶೇ.43.3ರಿಂದ ಶೇ.36ಕ್ಕೆ ಕುಸಿಯಲಿದೆ ಎಂದು ಸಮೀಕ್ಷೆಯ ವರದಿಯು ಹೇಳಿದೆ. ಉ.ಪ್ರದೇಶದಲ್ಲಿ ಬಿಜೆಪಿಯ ವಿರುದ್ಧ ಹೋರಾಡಲು ಈ ಎಲ್ಲ ಪಕ್ಷಗಳು ಒಂದಾದರೆ ಮಾತ್ರ ಇಂತಹ ಚಿತ್ರಣವನ್ನು ಊಹಿಸಬಹುದು ಎಂದು ವರದಿಯು ಪುನರುಚ್ಚರಿಸಿದೆ.

ಎಸ್ಪಿ ಮತ್ತು ಬಿಎಸ್ಪಿ ಕಾಂಗ್ರೆಸ್ನ್ನು ಮೈತ್ರಿಯಿಂದ ದೂರವಿರಿಸಿವೆಯಾದರೂ ಚುನಾವಣಾ ವರ್ಷದಲ್ಲಿ ರಾಜಕೀಯ ಲೆಕ್ಕಾಚಾರಗಳು ಆಗಾಗ್ಗೆ ಬದಲಾಗುತ್ತಿರುತ್ತವೆ. ಉದಾಹರಣೆಗೆ ಎಸ್ಪಿ-ಬಿಎಸ್ಪಿ ಮೈತ್ರಿ ಮಾಡಿಕೊಂಡಿದ್ದರೂ ಅದಿನ್ನೂ ಅಂತಿಮವಲ್ಲ ಎನ್ನುವ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕರು ಸಾಕಷ್ಟು ಸುಳಿವುಗಳನ್ನು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News