ಹಡಗುಗಳಲ್ಲಿ ಬೆಂಕಿ ದುರಂತ: ಆರು ಭಾರತೀಯ ನಾವಿಕರ ಸಾವು, ಆರು ಮಂದಿ ನಾಪತ್ತೆ

Update: 2019-01-23 18:28 GMT

ಹೊಸದಿಲ್ಲಿ, ಜ.23: ರಶ್ಯಾ ಸಮೀಪದ ಕೆರ್ಚ್ ಜಲಸಂಧಿಯಲ್ಲಿ ಎರಡು ತೈಲ ಹಡಗುಗಳಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಆರು ಭಾರತೀಯ ನಾವಿಕರು ಸಾವನ್ನಪ್ಪಿದ್ದು ಇತರ ಆರು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆ ಸೋಮವಾರ ನಡೆದಿದ್ದರೂ ಹಡಗಿನಿಂದ ಈಗಲೂ ಬೆಂಕಿ ಹೊರಬರುತ್ತಿರುವುದಾಗಿ ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ. ಆರು ಮಂದಿ ಭಾರತೀಯರೂ ಸೇರಿ ನಾಪತ್ತೆಯಾಗಿರುವ ಹತ್ತು ಮಂದಿಗಾಗಿ ರಶ್ಯಾವನ್ನು ಕ್ರಿಮಿಯದಿಂದ ಪ್ರತ್ಯೇಕಿಸುವ ಕೆರ್ಚ್ ಜಲಸಂಧಿಯಲ್ಲಿ ರಶ್ಯಾದ ರಕ್ಷಣಾ ತಂಡ ಶೋಧ ನಡೆಸುತ್ತಿದೆ.

ಅವಘಡಕ್ಕೀಡಾದ ಕ್ಯಾಂಡಿ ಎಂಬ ಹಡಗಿನಲ್ಲಿ 17 ಸಿಬ್ಬಂದಿಯಿದ್ದು ಇವರಲ್ಲಿ ಒಂಬತ್ತು ಟರ್ಕಿ ಪ್ರಜೆಗಳು ಮತ್ತು ಎಂಟು ಭಾರತೀಯರಾಗಿದ್ದಾರೆ. ಇನ್ನೊಂದು ಹಡಗು ಮಾಸ್ಟ್ರೊದಲ್ಲಿ 15 ಸಿಬ್ಬಂದಿಯಿದ್ದು ಏಳು ಟರ್ಕಿ ಪ್ರಜೆಗಳು, ಏಳು ಭಾರತೀಯರು ಮತ್ತು ಓರ್ವ ಲಿಬಿಯಾದ ನಾಗರಿಕ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಭಾರತೀಯ ನಾವಿಕರನ್ನು ಪಿನಲ್ ಕುಮಾರ್ ಭರತ್‌ಬಾಯ್ ತಂಡೆಲ್, ವಿಕ್ರಂ ಸಿಂಗ್, ಸರವಣನ್ ನಾಗರಾಜನ್, ವಿಶಾಲ್ ದೊಡ್, ರಾಜಾ ದೇಬ್‌ನಾರಾಯಣ್ ಪನಿಗ್ರಹಿ ಮತ್ತು ಕರಣ್ ಕುಮಾರ್ ಹರಿಬಾಯ್ ತಂಡೆಲ್ ಎಂದು ಗುರುತಿಸಲಾಗಿದೆ. ನಾಪತ್ತೆಯಾಗಿರುವ ಭಾರತೀಯರನ್ನು ಸಿದ್ದಾರ್ಥ್ ಮೆಹೆರ್, ನೀರಜ್ ಸಿಂಗ್, ಸೆಬಸ್ಟಿಯನ್ ಬ್ರಿಟ್ಟೊ ಬ್ರೀಝ್ಲಿನ್ ಸಹಾಯರಾಜ್, ರಿಶಿಕೇಶ್ ರಾಜು ಸಕ್ಪಾಲ್, ಅಕ್ಷಯ್ ಬಬನ್ ಜಾಧವ್ ಮತ್ತು ಆನಂದಶೇಖರ್ ಅವಿನಾಶ್ ಎಂದು ಗುರುತಿಸಲಾಗಿದೆ. ನಾಲ್ಕು ಭಾರತೀಯ ನಾವಿಕರು, ಹರೀಶ್ ಜೋಗಿ, ಸಚಿನ್ ಸಿಂಗ್, ಆಶೀಶ್ ಅಶೋಕ್ ನಾಯರ್ ಮತ್ತು ಕಮಲೇಶ್‌ಬಾಯ್ ಗೋಪಾಲ್‌ಬಾಯ್ ತಂಡೆಲ್‌ರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವಘಡಕ್ಕೀಡಾದ ಎರಡು ಹಡಗುಗಳಲ್ಲಿ ಒಂದು ಧ್ರವೀಕೃತ ನೈಸರ್ಗಿಕ ಅನಿಲವನ್ನು ಸಾಗಿಸುತ್ತಿದ್ದರೆ ಇನ್ನೊಂದು ಟ್ಯಾಂಕರ್ ಆಗಿತ್ತು. ಪರಸ್ಪರ ತೈಲವನ್ನು ವರ್ಗಾಯಿಸುವ ವೇಳೆ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News