ಎಸ್ಸಿ/ಎಸ್ಟಿ ಕಾಯ್ದೆ ತಿದ್ದುಪಡಿಗೆ ತಡೆ ನೀಡಲು ಸುಪ್ರೀಂ ನಕಾರ

Update: 2019-01-24 14:44 GMT

ಹೊಸದಿಲ್ಲಿ, ಜ.24: ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ)ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು , ನ್ಯಾ. ಲಲಿತ್ ಸದಸ್ಯರಾಗಿರುವ ನ್ಯಾಯಪೀಠವನ್ನು ಪುನಾರಚನೆ ಮಾಡುವಂತೆ ಮುಖ್ಯ ನಾಯಾಧೀಶರಿಗೆ ಸೂಚಿಸಿದೆ.

ಅಲ್ಲದೆ , ಸರ್ವೋಚ್ಛ ನ್ಯಾಯಾಲಯದ ಮಾರ್ಚ್ 2018ರ ತೀರ್ಪನ್ನು ವಿರೋಧಿಸಿ ಕೇಂದ್ರ ಸರಕಾರ ಸಲ್ಲಿಸಿರುವ ಅರ್ಜಿ ಹಾಗೂ ಎಸ್ಸಿ/ಎಸ್ಟಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಒಟ್ಟಿಗೇ ನಡೆಸಲು ಸೂಚಿಸಿದೆ. ಸರಕಾರಿ ಉದ್ಯೋಗದ ಸ್ಥಳದಲ್ಲಿ ಎಸ್ಸಿ/ ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ದುರುಪಯೋಗ ನಡೆಯುತ್ತಿದೆ ಎಂಬ ವ್ಯಾಪಕ ದೂರಿನ ಹಿನ್ನೆಲೆಯಲ್ಲಿ 2018ರ ಮಾರ್ಚ್‌ನಲ್ಲಿ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ , ದೂರು ಸಲ್ಲಿಕೆಯಾದೊಡನೆ ಆರೋಪಿಗಳ ಬಂಧನ ಸಲ್ಲದು. ಆರೋಪಿಗೆ ನಿರೀಕ್ಷಣಾ ಜಾಮೀನು ಪಡೆಯಲು ಅವಕಾಶವಿರಬೇಕು ಎಂದು ತಿಳಿಸಿತ್ತು. ನ್ಯಾ. ಯುಯು ಲಲಿತ್ ಈ ತೀರ್ಪು ನೀಡಿದ ನ್ಯಾಯಪೀಠದ ಸದಸ್ಯರಾಗಿದ್ದರು.

ಆದರೆ ಸುಪ್ರೀಂಕೋರ್ಟ್‌ನ ಆದೇಶವನ್ನು ಅನೂರ್ಜಿತಗೊಳಿಸಿದ್ದ ಸಂಸತ್ತು , ಎಸ್ಸಿ/ಎಸ್ಟಿ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಪ್ರಸ್ತಾವಿಸಿತ್ತು. ತಿದ್ದುಪಡಿಯಂತೆ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಪಡೆಯುವ ಅವಕಾಶವಿಲ್ಲ ಹಾಗೂ ಆರೋಪಿಗಳನ್ನು ತಕ್ಷಣ ಬಂಧಿಸಬಹುದಾಗಿದೆ.

ಈ ತಿದ್ದುಪಡಿ ಮಸೂದೆಗೆ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News