ಫೆ.1ರಿಂದ ಸರಕಾರಿ ನೇಮಕಾತಿಗಳಲ್ಲಿ ಶೇ.10 ಮೀಸಲಾತಿ ಜಾರಿ: ಕೇಂದ್ರ

Update: 2019-01-24 14:53 GMT

ಹೊಸದಿಲ್ಲಿ,ಜ.24: ಫೆ.1ರಿಂದ ಎಲ್ಲ ಕೇಂದ್ರ ಸರಕಾರಿ ಹುದ್ದೆಗಳ ನೇಮಕಾತಿಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ವರ್ಗಗಳಿಗೆ ಶೇ.10 ಮೀಸಲಾತಿಯನ್ನು ಜಾರಿಗೊಳಿಸಲಾಗುವುದು ಎಂದು ಸಿಬ್ಬಂದಿ ಸಚಿವಾಲಯವು ಆದೇಶದಲ್ಲಿ ತಿಳಿಸಿದೆ.

ಆರ್ಥಿಕವಾಗಿ ಹಿಂದುಳಿದಿರುವ ವರ್ಗಗಳಿಗೆ ಶೇ.10 ಮೀಸಲಾತಿಯನ್ನು ಜಾರಿಗೊಳಿಸಲು ವಿಧಿವಿಧಾನಗಳಿಗೆ ಸಂಬಂಧಿಸಿದಂತೆ ವಿವರವಾದ ಸೂಚನೆಗಳನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು ಎಂದು ಅದು ಹೇಳಿದೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಆದೇಶದಂತೆ ಎಸ್‌ಸಿ/ಎಸ್‌ಟಿಗಳು ಹಾಗೂ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗಾಗಿರುವ ಹಾಲಿ ಮೀಸಲಾತಿಯ ವ್ಯಾಪ್ತಿಗೊಳಪಡದವರು ಮತ್ತು ಒಟ್ಟು ವಾರ್ಷಿಕ ಕೌಟುಂಬಿಕ ಆದಾಯ ಎಂಟು ಲ.ರೂ.ಗಿಂತ ಕಡಿಮೆಯಿರುವವರು ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿಯ ಲಾಭವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.

ಕುಟುಂಬವು ಐದು ಎಕರೆ ಅಥವಾ ಅದಕ್ಕೂ ಹೆಚ್ಚಿನ ಕೃಷಿಭೂಮಿಯನ್ನು,1,000 ಚದುರಡಿ ಮತ್ತು ಹೆಚ್ಚಿನ ವಿಸ್ತೀರ್ಣದ ನಿವಾಸವನ್ನು,ಅಧಿಸೂಚಿತ ಮುನ್ಸಿಪಲ್ ಪ್ರದೇಶಗಳಲ್ಲಿ 100 ಚದುರ ಯಾರ್ಡ್ ಮತ್ತು ಅದಕ್ಕೂ ಹೆಚ್ಚಿನ ವಿಸ್ತೀರ್ಣದ ವಸತಿ ನಿವೇಶನವನ್ನು ಮತ್ತು ಅಧಿಸೂಚಿತ ಮುನ್ಸಿಪಲ್ ಪ್ರದೇಶಗಳಿಂದ ಹೊರತಾದ ಪ್ರದೇಶಗಳಲ್ಲಿ 200 ಚದುರ ಯಾರ್ಡ್ ಮತ್ತು ಅದಕ್ಕೂ ಹೆಚ್ಚಿನ ವಿಸ್ತೀರ್ಣದ ವಸತಿ ನಿವೇಶನವನ್ನು ಹೊಂದಿದ್ದರೆ ಕೌಟುಂಬಿಕ ಆದಾಯವನ್ನು ಪರಿಗಣಿಸದೆ ಅಂತಹ ಕುಟುಂಬಗಳಿಗೆ ಸೇರಿದ ಅಭ್ಯರ್ಥಿಗಳನ್ನು ಆರ್ಥಿಕವಾಗಿ ದುರ್ಬಲರಿಗೆ ಮೀಸಲಾತಿಯಿಂದ ಹೊರಗಿರಿಸಲಾಗುವುದು ಎಂದೂ ಅದು ಸ್ಪಷ್ಟಪಡಿಸಿದೆ.

ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಕ್ಕಾಗಿ ಮೀಸಲಾತಿಗೆ ಸಂಬಂಧಿಸಿದಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಸೂಚನೆಗಳನ್ನು ಹೊರಡಿಸಲಿದೆ ಎಂದು ಆದೇಶವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News