ಬೀಫ್‌ ಮುಕ್ತ ಕರೆನ್ಸಿ ನೋಟುಗಳನ್ನು ಮುದ್ರಿಸಿ: ಆಸ್ಟ್ರೇಲಿಯ ಕೇಂದ್ರ ಬ್ಯಾಂಕ್‌ ಗೆ ಹಿಂದು ಸಂಘಟನೆ ಮನವಿ

Update: 2019-01-24 16:44 GMT

ಸಿಡ್ನಿ,ಜ.24: ಕರೆನ್ಸಿ ನೋಟುಗಳಲ್ಲಿ ದನದ ಕೊಬ್ಬನ್ನು ಉಪಯೋಗಿಸುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಹಿಂದು ಸಂಘಟನೆ ಬೀಫ್‌ ಮುಕ್ತ ಕರೆನ್ಸಿ ನೋಟುಗಳನ್ನು ಮುದ್ರಿಸುವಂತೆ ಆಸ್ಟ್ರೇಲಿಯದ ಕೇಂದ್ರ ಬ್ಯಾಂಕ್‌ ಗೆ ಮನವಿ ಮಾಡಿದೆ ಎಂದು ಡೈಲಿಮೇಲ್ ಆಸ್ಟ್ರೇಲಿಯ ವರದಿ ಮಾಡಿದೆ.

ದನದ ಕೊಬ್ಬಿನಿಂದ ಪಡೆಯಲಾಗುವ ಟಲ್ಲೊವ್ ಎಂಬ ವಸ್ತುವನ್ನು ಕರೆನ್ಸಿ ನೋಟುಗಳಲ್ಲಿ ಬಳಸಲಾಗುತ್ತದೆ ಎಂದು ಬ್ಯಾಂಕ್ ಆಫ್ ಇಂಗ್ಲೆಂಡ್ 2016ರಲ್ಲಿ ಟ್ವೀಟ್ ಮಾಡಿತ್ತು. ತನ್ನ ಪಾಲಿಮರ್ ನೋಟುಗಳಲ್ಲಿ ಈ ವಸ್ತುವಿನ ಅಂಶವಿದೆ ಎಂದು ಅದು ತಿಳಿಸಿತ್ತು. ಇದೇ ವೇಳೆ, ಆಸ್ಟ್ರೇಲಿಯದ ನೋಟುಗಳಲ್ಲೂ ಈ ಅಂಶವಿರುವುದಾಗಿ ಎಸ್‌ಬಿಎಸ್ ಎಂಬ ಸುದ್ದಿ ಸಂಸ್ಥೆ ವರದಿ ಮಾಡಿತ್ತು.

ಆಸ್ಟ್ರೇಲಿಯ ಕೇಂದ್ರ ಬ್ಯಾಂಕ್‌ಗೆ ಪತ್ರ ಬರೆದಿರುವ ಅಮೆರಿಕ ಮೂಲದ ಯುನಿವರ್ಸಲ್ ಸೊಸೈಟಿ ಆಫ್ ಹಿಂದುಯಿಸಂನ ಅಧ್ಯಕ್ಷ ರಾಜನ್ ಝೆಡ್, ಹಿಂದುಗಳ ಭಾವನೆಯನ್ನು ಗೌರವಿಸುವಂತೆ ಮತ್ತು ಬೀಫನ್ನು ಕಚ್ಚಾವಸ್ತುವಾಗಿ ಬಳಸದ ಕರೆನ್ಸಿ ನೋಟುಗಳನ್ನು ಮುದ್ರಿಸುವಂತೆ ಮನವಿ ಮಾಡಿದ್ದಾರೆ. ಬೀಫ್ ಸೇವನೆ ಹಿಂದು ಧರ್ಮದಲ್ಲಿ ನಿಷಿದ್ಧವಾಗಿದೆ ಮತ್ತು ಅದರಿಂದ ತಯಾರಿಸಲಾದ ವಸ್ತುಗಳು ಹಿಂದುಗಳ ಧಾರ್ಮಿಕ ಸ್ಥಳಗಳನ್ನು ಪ್ರವೇಶಿಸುವುದರ ಮೇಲೆ ನಿಷೇಧವಿದೆ ಎಂದು ತಿಳಿಸಿರುವ ಝೆಡ್, ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಆಸ್ಟ್ರೇಲಿಯದ ಪ್ರಧಾನಿ ಸ್ಕಾಟ್ ಮಾರಿಸನ್ ಅವರಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News