×
Ad

ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ವ್ಯಕ್ತಿಯನ್ನು ಸರಪಳಿಯಿಂದ ಬಂಧಿಸಿಟ್ಟ ಪೊಲೀಸರು !

Update: 2019-01-24 22:23 IST

ರೊಹ್ಟಕ್,ಜ.24: ಜಾನುವಾರು ಕಳ್ಳಸಾಗಾಟ ಮಾಡುತ್ತಿದ್ದಾರೆ ಎಂಬ ಆರೋಪದಲ್ಲಿ ಹರ್ಯಾಣದ ಗ್ರಾಮವೊಂದರಲ್ಲಿ ವ್ಯಕ್ತಿಯೊಬ್ಬನ ಮೇಲೆ 200ಕ್ಕೂ ಹೆಚ್ಚು ಜನರಿದ್ದ ಗುಂಪು ಹಲ್ಲೆ ನಡೆಸಿ, ನಗ್ನಗೊಳಿಸಿ ದೋಚಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ತನ್ನ ರಕ್ಷಣೆಗೆ ಆಗಮಿಸಿದ ಪೊಲೀಸರು ಪೊಲೀಸ್ ಠಾಣೆಯ ಒಳಗೆ ಒಂದು ದಿನ ಆಹಾರ, ನೀರು ಅಥವಾ ವೈದ್ಯಕೀಯ ಚಿಕಿತ್ಸೆಯನ್ನೂ ನೀಡದೆ ಸರಪಳಿಯಿಂದ ಕಟ್ಟಿ ಹಾಕಿದ್ದರು ಎಂದು ಜನರಿಂದ ಹಲ್ಲೆಗೊಳಗಾದ ವ್ಯಕ್ತಿ ಎನ್‌ಡಿಟಿವಿಗೆ ತಿಳಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ಆದರೆ ಈ ಆರೋಪವನ್ನು ಪೊಲೀಸರು ತಳ್ಳಿ ಹಾಕಿದ್ದಾರೆ.

ಉತ್ತರ ಪ್ರದೇಶ ನಿವಾಸಿ ನೌಶಾದ್ ಮುಹಮ್ಮದ್ ವಿರುದ್ಧ ಜಾನುವಾರು ಕಳ್ಳಸಾಗಾಟಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. “ಕೃಷಿಕಾರ್ಯಕ್ಕಾಗಿ ಜಾನುವಾರುಗಳನ್ನು ಖರೀದಿಸಲು ಶನಿವಾರ ರೊಹ್ಟಕ್‌ಗೆ ತೆರಳಿದ್ದೆ. ಸಂಜೆ ಮನೆಗೆ ಮೂರು ಎಮ್ಮೆಗಳ ಜೊತೆ ವಾಪಸಾಗುತ್ತಿದ್ದ ವೇಳೆ ಬಲೌತ್ ಸಮೀಪ ನನ್ನ ವಾಹನವನ್ನು ಜನರ ಗುಂಪೊಂದು ತಡೆಯಿತು. ನನ್ನ ಬಟ್ಟೆ ಬಿಚ್ಚಿದ ಅವರು ನನ್ನನ್ನು ಥಳಿಸಿ ನನ್ನ ಬಳಿಯಿದ್ದ 2000 ರೂ.ವನ್ನು ದೋಚಿದ್ದಾರೆ. ನಂತರವೂ ಸುಮ್ಮನಾಗದ ಹಲ್ಲೆಕೋರರು ನನ್ನ ಮೇಲೆ ಕಲ್ಲು ಮತ್ತು ಶೂಗಳನ್ನು ಎಸೆದಿದ್ದಾರೆ” ಎಂದು ನೌಶಾದ್ ಆರೋಪಿಸಿದ್ದಾರೆ.

ನೌಶಾದ್‌ರನ್ನು ರಕ್ಷಿಸಿದ ಪೊಲೀಸರು ಅವರನ್ನು ಹಾಸಿಗೆಯೊಂದಕ್ಕೆ ಸರಪಳಿಯಿಂದ ಕಟ್ಟಿ ಹಾಕಿದ್ದರು. ಹದಿನಾರು ಗಂಟೆಗಳ ಕಾಲ ನೋವಿನಿಂದ ಬಳಲುತ್ತಿದ್ದ ನೌಶಾದ್‌ಗೆ ವೈದ್ಯಕೀಯ ಚಿಕಿತ್ಸೆಯನ್ನೂ ನೀಡದೆ, ಆಹಾರವನ್ನೂ ನೀಡದೆ ಕೇವಲ ಒಂದು ಕಪ್ ಚಹಾ ನೀಡಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ಈ ಆರೋಪವನ್ನು ತಳ್ಳಿಹಾಕಿರುವ ಸಾದರ್ ಪೊಲೀಸ್ ಠಾಣೆಯ ಅಧಿಕಾರಿ, ನೌಶಾದ್‌ನನ್ನು ಶನಿವಾರವೇ ಬಿಡುಗಡೆ ಮಾಡಿ ಕಳುಹಿಸಲಾಗಿದೆ. ಫೋಟೊಗಳಲ್ಲಿ ಕಾಣುವ ಪೊಲೀಸ್ ಠಾಣೆ ನಮ್ಮದಲ್ಲ ಎಂದು ತಿಳಿಸಿದ್ದಾರೆ.

ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು ಈಗಾಗಲೇ 12 ಮಂದಿ ಆರೋಪಿಗಳ ವಿರುದ್ಧ ದೂರು ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News