×
Ad

ಯಾವುದೇ ನಿರ್ಧಾರಕ್ಕೆ ಬಾರದ ಪ್ರಧಾನಿ ನೇತೃತ್ವದ ಸಮಿತಿ ಸಭೆ

Update: 2019-01-24 23:03 IST

ಹೊಸದಿಲ್ಲಿ,ಜ.24: ಮುಂದಿನ ಸಿಬಿಐ ಮುಖ್ಯಸ್ಥರನ್ನು ನಿರ್ಧರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಆಯ್ಕೆ ಸಮಿತಿಯ ಸಭೆ ಗುರುವಾರ ನಡೆಯಿತಾದರೂ ಯಾವುದೇ ನಿರ್ಧಾರಕ್ಕೆ ಬರಲು ಸಮಿತಿಗೆ ಸಾಧ್ಯವಾಗಲಿಲ್ಲ. ಸಮಿತಿಯು ಶೀಘ್ರವೇ ಇನ್ನೊಮ್ಮೆ ಸಭೆ ಸೇರುವ ಸಾಧ್ಯತೆಯಿದೆ.

ಈ ತಿಂಗಳ ಆರಂಭದಲ್ಲಿ ಅಲೋಕ ವರ್ಮಾರ ನಿರ್ಗಮನದ ಬಳಿಕ ಸಿಬಿಐ ಮುಖ್ಯಸ್ಥರ ಹುದ್ದೆ ಖಾಲಿಯಾಗಿಯೇ ಇದೆ.

ಲೋಕ ಕಲ್ಯಾಣ ಮಾರ್ಗ್‌ನಲ್ಲಿರುವ ಪ್ರಧಾನಿಯವರ ಅಧಿಕೃತ ನಿವಾಸದಲ್ಲಿ ನಡೆದ ಸಭೆಯಲ್ಲಿ ಮುಖ್ಯ ನ್ಯಾಯಾಧೀಶ ರಂಜನ ಗೊಗೊಯಿ ಮತ್ತು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ್ದರು. ಆಯ್ಕೆ ಸಮಿತಿಯ ಮುಂದೆ ಹೆಸರುಗಳನ್ನು ಶಿಫಾರಸು ಮಾಡಲಾಗಿರುವ ಅಧಿಕಾರಿಗಳ ಹಿಂದಿನ ಸೇವೆಗಳ ಬಗ್ಗೆ ಮತ್ತು ಅವರ ದಕ್ಷತೆಯ ಬಗ್ಗೆ ತಮಗೆ ಹೆಚ್ಚಿನ ಮಾಹಿತಿಗಳ ಅಗತ್ಯವಿದೆ ಎಂದು ಮು.ನ್ಯಾ.ಗೊಗೊಯಿ ಮತ್ತು ಖರ್ಗೆ ತಿಳಿಸಿದರು. ಸಮಿತಿಯ ಮುಂದಿನ ಸಭೆಯನ್ನು ಶೀಘ್ರವೇ ಕರೆಯುವಂತೆಯೂ ಅವರು ಕೋರಿಕೊಂಡರು.

ಭ್ರಷ್ಟಾಚಾರದ ಆರೋಪಗಳಲ್ಲಿ ಸಿಬಿಐ ವಿಶೇಷ ನಿರ್ದೇಶಕ ರಾಕೇಶ ಅಸ್ತಾನಾರೊಂದಿಗೆ ಕಚ್ಚಾಟದಲ್ಲಿ ತೊಡಗಿದ್ದಕ್ಕಾಗಿ ಸಮಿತಿಯು ಜ.10ರಂದು ವರ್ಮಾರನ್ನು ಸಿಬಿಐ ನಿರ್ದೇಶಕರ ಹುದ್ದೆಯಿಂದ ವಜಾಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News