ಜ್ಞಾನಪೀಠ ಪ್ರಶಸ್ತಿ ವಿಜೇತೆ ಕೃಷ್ಣಾ ಸೋಬ್ತಿ ನಿಧನ

Update: 2019-01-25 12:41 GMT

ಹೊಸದಿಲ್ಲಿ,ಜ.25: ಜ್ಞಾನಪೀಠ ಪ್ರಶಸ್ತಿ ವಿಜೇತೆ,ದಿಟ್ಟ ಲೇಖಕಿ ಕೃಷ್ಣಾ ಸೋಬ್ತಿ(93) ಅವರು ಶುಕ್ರವಾರ ದಿಲ್ಲಿಯಲ್ಲಿ ನಿಧನರಾದರು. ತನ್ನ ಮಿತ್ರೋ ಮರಜಾನಿ,ಜಿಂದಗಿನಾಮಾ ಮತ್ತು ಸೂರಜಮುಖಿ ಅಂಧೇರೆಯಂತಹ ಕೃತಿಗಳಿಂದ ಓದುಗರ ಮನಸ್ಸುಗಳನ್ನು ಗೆದ್ದಿದ್ದ ಸೋಬ್ತಿ ಅವರು ವೃದ್ಧಾಪ್ಯದ ಕಾಯಿಲೆಗಳಿಂದಾಗಿ ಕಳೆದೆರಡು ತಿಂಗಳುಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಸೋಬ್ತಿ ಫೆಬ್ರುವರಿಯಲ್ಲಿ 94ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದರು. ತೀವ್ರ ಅನಾರೋಗ್ಯದಿಂದಿದ್ದರೂ ಅವರಿಗೆ ತನ್ನ ಚಿಂತನೆಗಳು ಮತ್ತು ಸಮಾಜದಲ್ಲಿ ಏನು ನಡೆಯುತ್ತಿದೆ ಎನ್ನುವುದರ ಬಗ್ಗೆ ಅರಿವು ಇತ್ತು. ಅವರು ನಮ್ಮ ಕಾಲದ ಅತ್ಯಂತ ಸೂಕ್ಷ್ಮ ಮತ್ತು ಜಾಗ್ರತ ಲೇಖಕರಲ್ಲಿ ಒಬ್ಬರಾಗಿದ್ದರು. ಅವರು ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಅನನ್ಯತೆ ಮತ್ತು ಘನತೆಯನ್ನು ಸೃಷ್ಟಿಸಿಕೊಂಡಿದ್ದರು ಎಂದು ಅವರ ಸ್ನೇಹಿತ ಹಾಗೂ ರಾಜಕಮಲ ಪ್ರಕಾಶನದ ಆಡಳಿತ ನಿರ್ದೇಶಕ ಅಶೋಕ ಮಹೇಶ್ವರಿ ತಿಳಿಸಿದರು.

ಸೋಬ್ತಿಯವರ ಇತ್ತೀಚಿನ ಕೃತಿ ‘ಚನ್ನಾ’ ಜ.11ರಂದು ಹೊಸದಿಲ್ಲಿ ವಿಶ್ವ ಪುಸ್ತಕ ಮೇಳದಲ್ಲಿ ಬಿಡುಗಡೆಗೊಂಡಿತ್ತು. ಈ ಕೃತಿಯನ್ನು ಅವರು 60ವರ್ಷಗಳ ಹಿಂದೆಯೇ ರಚಿಸಿದ್ದರಾದರೂ ಎಂದಿಗೂ ಪ್ರಕಟಗೊಂಡಿರಲಿಲ್ಲ.

1925ರಲ್ಲಿ ಪಾಕಿಸ್ತಾನದ ಗುಜರಾತ ಪ್ರಾಂತ್ಯದಲ್ಲಿ ಜನಿಸಿದ್ದ ಸೋಬ್ತಿ ಅವರು ಮಹಿಳೆಯರ ಪರ ಸದಾ ಧ್ವನಿ ಎತ್ತುತ್ತಿದ್ದರು. 2017ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಗೆದ್ದಿದ್ದ ಅವರು ಸಾಹಿತ್ಯ ಅಕಾಡಮಿ ಪ್ರಶಸ್ತಿಗೂ ಭಾಜನರಾಗಿದ್ದರು. ಪದ್ಮಭೂಷಣ ಪ್ರಶಸ್ತಿಯು ಒಲಿದು ಬಂದಿತ್ತಾದರೂ ಅದನ್ನವರು ನಿರಾಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News