×
Ad

ವಿದೇಶಿ ಉತ್ಪನ್ನಗಳಿಗೆ ಅಧಿಕ ಆಮದು ತೆರಿಗೆ ವಿಧಿಸುವ ಮಸೂದೆ ಮಂಡಿಸಿದ ಟ್ರಂಪ್ ಆಡಳಿತ

Update: 2019-01-25 21:40 IST

ವಾಶಿಂಗ್ಟನ್, ಜ. 25: ಅಮೆರಿಕದ ಉತ್ಪನ್ನಗಳ ಆಮದಿನ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ದೇಶಗಳಿಂದ ಮಾಡುವ ಆಮದಿನ ಮೇಲೆ ಅದಕ್ಕೆ ಸರಿಯಾದ ಪ್ರಮಾಣದಲ್ಲಿ ತೆರಿಗೆ ವಿಧಿಸಲು ಅಮೆರಿಕದ ಅಧ್ಯಕ್ಷರಿಗೆ ಅಧಿಕಾರ ನೀಡುವ ಮಸೂದೆಯೊಂದನ್ನು ಶ್ವೇತಭವನ ಗುರುವಾರ ಸಂಸತ್ತಿನಲ್ಲಿ ಮಂಡಿಸಿದೆ.

ಭಾರತ ಹಾಗೂ ಇತರ ಕೆಲವು ದೇಶಗಳು ಅಮೆರಿಕದ ಉತ್ಪನ್ನಗಳ ಆಮದಿನ ಮೇಲೆ ಭಾರೀ ಪ್ರಮಾಣದಲ್ಲಿ ತೆರಿಗೆ ವಿಧಿಸುತ್ತವೆ ಎಂಬುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುತ್ತಾ ಬಂದಿದ್ದಾರೆ. ಅದಕ್ಕೆ ಸರಿಸಮಾನ ತೆರಿಗೆಯನ್ನು ಆ ದೇಶಗಳಿಂದ ಮಾಡುವ ಆಮದಿನ ಮೇಲೆಯೂ ವಿಧಿಸುವುದಾಗಿ ಅವರು ಈಗಾಗಲೇ ಬೆದರಿಕೆ ಹಾಕಿದ್ದಾರೆ.

ಅಮೆರಿಕದ ಹ್ಯಾರ್ಲೆ-ಡೇವಿಡ್‌ಸನ್ಸ್ ಮತ್ತು ಬ್ರಿಟನ್‌ನ ಟ್ರಯಂಫ್ ಮುಂತಾದ ದುಬಾರಿ ಹಾಗೂ ಅಧಿಕ ಸಾಮರ್ಥ್ಯದ ಮೋಟರ್ ಬೈಕ್‌ಗಳ ಮೇಲೆ ಭಾರತ ವಿಧಿಸುತ್ತಿದ್ದ ಆಮದು ತೆರಿಗೆಯು ಟ್ರಂಪ್‌ರ ಅಸಮಾಧಾನಕ್ಕೆ ಕಾರಣವಾಗಿರುವುದನ್ನು ಸ್ಮರಿಸಬಹುದಾಗಿದೆ.

ಈಗ ವಿಸ್ಕಿಯ ಸರದಿ.

‘‘ನೀವು ನಂಬಲಾರಿರಿ, ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಿಸ್ಕಿಯ ಮೇಲೆ ಭಾರತ 150 ಶೇಕಡ ತೆರಿಗೆ ವಿಧಿಸುತ್ತಿದೆ’’ ಎಂದು ತನ್ನ ರಿಪಬ್ಲಿಕನ್ ಪಕ್ಷದ ಸಂಸದರೊಂದಿಗೆ ಗುರುವಾರ ಶ್ವೇತಭವನದಲ್ಲಿ ನಡೆಸಿದ ಸಭೆಯಲ್ಲಿ ಟ್ರಂಪ್ ಹೇಳಿದರು.

‘‘ಅವರು ವಿಸ್ಕಿ ತಯಾರಿಸುತ್ತಾರೆ, ಅದನ್ನು ನಮಗೆ ಮಾರುತ್ತಾರೆ. ನಾವು ಅದಕ್ಕೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ನಾವು ಅದನ್ನು ಅವರಿಗೆ ಮಾರಿದರೆ, ಅವರು ನಮಗೆ 150 ಶೇಕಡ ಶುಲ್ಕ ವಿಧಿಸುತ್ತಾರೆ’’ ಎಂದರು.

2 ನಿಮಿಷ ಮಾತನಾಡಿ 50 ಶೇ. ತೆರಿಗೆ ಇಳಿಸಿದೆ!

ಅಮೆರಿಕದ ಮೋಟರ್ ಸೈಕಲ್‌ಗಳ ಆಮದಿನ ಮೇಲೆ ಭಾರತ ವಿಧಿಸುತ್ತಿರುವ ತೆರಿಗೆಯ ಬಗ್ಗೆ ಮಾತನಾಡುವುದು ಟ್ರಂಪ್‌ರ ಅತ್ಯಂತ ನೆಚ್ಚಿನ ವಿಷಯ!

‘‘ಉದಾಹರಣೆಗೆ, ನಾವೀಗ ಮೋಟರ್‌ಸೈಕಲ್‌ಗಳ ವಿಷಯಕ್ಕೆ ಬರೋಣ’’ ಎಂದು ರಿಪಬ್ಲಿಕನ್ ಪಕ್ಷದ ಸಂಸದರ ಸಭೆಯಲ್ಲಿ ಮಾತನಾಡುತ್ತಿದ್ದ ಟ್ರಂಪ್ ಹೇಳಿದರು.

‘‘ಮೋಟರ್‌ಸೈಕಲ್‌ಗಳ ಮೇಲಿನ ತೆರಿಗೆ 100 ಶೇಕಡ ಆಗಿತ್ತು. ನಾನು ಕೇವಲ ಎರಡು ನಿಮಿಷ ಮಾತನಾಡಿ ಅದನ್ನು 50 ಶೇಕಡಕ್ಕೆ ತಂದೆ. ಅದು ಈಗಲೂ 50 ಶೇಕಡದಲ್ಲೇ ಇದೆ. ಆದರೆ, ಭಾರತದಿಂದ ನಾವು ಆಮದು ಮಾಡಿಕೊಳ್ಳುವ ಬೈಕ್‌ಗಳ ಮೇಲೆ ನಾವು ವಿಧಿಸುವುದು 2.4 ಶೇಕಡ ತೆರಿಗೆ ಮಾತ್ರ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News