×
Ad

ಕಮಲಾ ಹ್ಯಾರಿಸ್ ಹುಟ್ಟಿಗೆ ಸಂಬಂಧಿಸಿದ ಟ್ವೀಟ್‌ಗೆ ಸಿಎನ್‌ಎನ್ ನಿರೂಪಕನಿಂದ ಕ್ಷಮೆಯಾಚನೆ

Update: 2019-01-25 21:48 IST

ವಾಶಿಂಗ್ಟನ್, ಜ. 25: ತಾನು ಅಮೆರಿಕದಲ್ಲಿ ಹುಟ್ಟಿದ್ದು ದೇಶದ ಅಧ್ಯಕ್ಷೆಯಾಗಲು ಅರ್ಹತೆ ಹೊಂದಿದ್ದೇನೆ ಎಂಬುದನ್ನು ಅಮೆರಿಕದ ಪ್ರಥಮ ಭಾರತ ಮೂಲದ ಸೆನೆಟರ್ ಕಮಲಾ ಹ್ಯಾರಿಸ್ ಸಾಬೀತುಪಡಿಸಬೇಕಾಗುತ್ತದೆ ಎಂಬ ಇಂಗಿತ ಹೊಂದಿರುವ ಟ್ವೀಟ್‌ಗಾಗಿ ಸಿಎನ್‌ಎನ್ ಸುದ್ದಿ ವಾಹಿನಿಯ ನಿರೂಪಕರೊಬ್ಬರು ಕ್ಷಮೆ ಯಾಚಿಸಿದ್ದಾರೆ.

2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಸ್ಪರ್ಧಿಸುವುದಾಗಿ 54 ವರ್ಷದ ಕಮಲಾ ಕಳೆದ ವಾರ ಘೋಷಿಸಿರುವುದನ್ನು ಸ್ಮರಿಸಬಹುದಾಗಿದೆ.

ಎಬಿಸಿ ಚಾನೆಲ್‌ನ ‘ದ ವ್ಯೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಕ್ರಿಸ್ ಕುವಮೊ, ತನ್ನಿಂದ ತಪ್ಪಾಗಿದೆ ಹಾಗೂ ತಾನು ಮಂಗಳವಾರ ಮಾಡಿರುವ ಟ್ವೀಟನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ ಎಂದು ಹೇಳಿದರು.

‘‘ನಾನು ತಪ್ಪು ಮಾಡಿದೆ. ನಾನು ನನ್ನ ರೇಡಿಯೊ ಕಾರ್ಯಕ್ರಮದಲ್ಲಿ ತೊಡಗಿದ್ದಾಗ ಆ ಟ್ವೀಟನ್ನು ಬರೆದೆ’’ ಎಂದರು.

ಕಮಲಾ ಹ್ಯಾರಿಸ್ ಬೆಂಬಲಿಗರಿಂದ ಟೀಕೆಗೊಳಗಾದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

ಕ್ಯಾಲಿಫೋರ್ನಿಯದ ಸೆನೆಟರ್ ಕಮಲಾ ಹ್ಯಾರಿಸ್ ಅಮೆರಿಕದ ಓಕ್‌ಲ್ಯಾಂಡ್ ರಾಜ್ಯದಲ್ಲಿ ಹುಟ್ಟಿದವರು. ಅವರ ಹೆತ್ತವರು ಭಾರತ ಮತ್ತು ಜಮೈಕಾಗಳಿಂದ ಅಮೆರಿಕಕ್ಕೆ ವಲಸೆ ಬಂದವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News