ಎರಡು ದಶಕಗಳಲ್ಲೇ ಕಳೆದ ವರ್ಷ ಮರಣ ದಂಡನೆ ಹೆಚ್ಚಳ: ಸಮೀಕ್ಷೆ

Update: 2019-01-25 17:58 GMT

 ಹೊಸದಿಲ್ಲಿ, ಜ. 25: ಭಾರತದ ವಿಚಾರಣಾ ನ್ಯಾಯಾಲಯಗಳಲ್ಲಿ ಮರಣದಂಡನೆ ವಿಧಿಸಿರುವ ಸಂಖ್ಯೆ 2018ರಲ್ಲಿ ತೀವ್ರ ಏರಿಕೆಯಾಗಿದೆ ಎಂದು ದಿಲ್ಲಿಯ ರಾಷ್ಟ್ರೀಯ ಕಾನೂನು ವಿದ್ಯಾನಿಲಯದ ಪ್ರೊಜೆಕ್ಟ್ 39ಎ ಸಿದ್ಧಪಡಿಸಿದ ‘ಭಾರತದಲ್ಲಿ ಮರಣದಂಡನೆ: ವಾರ್ಷಿಕ ಅಂಕಿ-ಅಂಶ ವರದಿ 2018’ ತಿಳಿಸಿದೆ. ವಿಚಾರಣಾ ನ್ಯಾಯಾಲಯದಲ್ಲಿ 2000ದಿಂದ ಈಚೆಗೆ ಕಳೆದ ವರ್ಷ ಅತ್ಯಧಿಕ ಅಂದರೆ 162 ಮರಣ ದಂಡನೆ ವಿಧಿಸಲಾಗಿದೆ. 2017ರಲ್ಲಿ 108 ಮಂದಿಗೆ ಮರಣ ದಂಡನೆ ವಿಧಿಸಲಾಗಿದೆ. 8 ರಾಜ್ಯಗಳಲ್ಲಿ ಮರಣ ದಂಡನೆ ವಿಧಿಸಲಾಗಿಲ್ಲ. ಆ 8 ರಾಜ್ಯಗಳೆಂದರೆ ಅರುಣಾಚಲ ಪ್ರದೇಶ, ಗೋವಾ, ಜಮ್ಮು ಕಾಶ್ಮೀರ, ಮಿಝೋರಾಂ, ನಾಗಾಲ್ಯಾಂಡ್, ಸಿಕ್ಕಿಂ ಹಾಗೂ ತ್ರಿಪುರಾ. ಕಳೆದ ವರ್ಷ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದ 12ರಲ್ಲಿ 11 ಪ್ರಕರಣಗಳಲ್ಲಿ ಶಿಕ್ಷೆಯನ್ನು ಮರಣದಂಡನೆಯಿಂದ ಜೀವಾವಧಿಗೆ ಇಳಿಸಿತ್ತು. ಡಿಸೆಂಬರ್ 16ರಂದು ನಡೆದ ದಿಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಮೂವರು ಅಪರಾಧಿಗಳ ಮರಣದಂಡನೆ ಯನ್ನು ಅದು ಎತ್ತಿ ಹಿಡಿದಿತ್ತು.

ಭಾರತದಲ್ಲಿ ಮರಣದಂಡನೆಗೆ ಎದುರು ನೋಡುತ್ತಿರುವ ಸಂಖ್ಯೆ 2018 ಡಿಸೆಂಬರ್‌ನಲ್ಲಿ 426, 2017 ಡಿಸೆಂಬರ್‌ನಲ್ಲಿ 366 ಹಾಗೂ 2016ರಲ್ಲಿ 400. ಕಳೆದ ವರ್ಷ ಶಾಸಕಾಂಗದ ಮಧ್ಯಪ್ರವೇಶದಿಂದ ಮರಣದಂಡನೆಯನ್ನು ನರಹತ್ಯೆಯಲ್ಲದ ಪ್ರಕರಣಕ್ಕೆ ವಿಸ್ತರಿಸಿದ ಪರಿಣಾಮ ಮರಣದಂಡನೆಯ ಸಂಖ್ಯೆ ಏರಿಕೆ ಆಗಿರುವ ಸಾಧ್ಯತೆ ಇದೆ. ಅಲ್ಲದೆ 12 ವರ್ಷಕ್ಕಿಂತ ಕೆಳಗಿನ ಬಾಲಕಿಯರ ಮೇಲಿನ ಅತ್ಯಾಚಾರ ಹಾಗೂ ಸಾಮೂಹಿಕ ಅತ್ಯಾಚಾರಕ್ಕೆ ಐಪಿಸಿ ಸೆಕ್ಷನ್‌ಗೆ ಸಂಸತ್ತಿನಲ್ಲಿ ಆಗಸ್ಟ್‌ನಲ್ಲಿ ತಿದ್ದುಪಡಿ ತಂದು ಈ ಹಿಂದೆ ನೀಡುತ್ತಿದ್ದ ಶಿಕ್ಷೆಗೆ ಬದಲು ಮರಣದಂಡನೆ ವಿಧಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News