ಭೀಮಾ-ಕೋರೆಗಾಂವ್ ಹಿಂಸಾಚಾರ: ಆನಂದ್ ತೇಲ್ತುಂಬ್ಡೆ ಬಿಡುಗಡೆ ಮನವಿಗೆ ಜಾಗತಿಕ ಬೆಂಬಲ
ಹೊಸದಿಲ್ಲಿ,ಜ.26: ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಪುಣೆ ಪೊಲೀಸರಿಂದ ಬಂಧನಕ್ಕೀಡಾಗಿರುವ ಲೇಖಕ ಆನಂದ್ ತೇಲ್ತುಂಬ್ಡೆಯವರನ್ನು ಶೀಘ್ರ ಬಿಡುಗಡೆ ಮಾಡಬೇಕೆಂದು ಕೋರಿ ಸಲ್ಲಿಸಲಾದ ಮೇಲ್ಮನವಿಗೆ ಜಾಗತಿಕ ಬೆಂಬಲ ದೊರಕಿದೆ ಎಂದು ಆಂಗ್ಲ ಮಾಧ್ಯಮ ವರದಿ ಮಾಡಿದೆ.
ಪುಣೆ ಪೊಲೀಸರು ಸಲ್ಲಿಸಿರುವ ಸುಳ್ಳು ಪ್ರಕರಣದ ಆಧಾರದಲ್ಲಿ ಅಪ್ರಜಾಸತಾತ್ಮಕ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಆಂನಂದ್ ತೇಲ್ತುಂಬ್ಡೆಯನ್ನು ಬಂಧಿಸಿರುವುದು ಅಸಂಬದ್ಧವಾಗಿದೆ. ಪೊಲೀಸರ ಸುಳ್ಳು ಆರೋಪಗಳ ಹಿನ್ನೆಲೆಯಲ್ಲಿ ಮಾನವ ಹಕ್ಕುಗಳ ಹೋರಾಟಗಾರರು, ವಕೀಲರು ಮತ್ತು ಬುದ್ಧಿಜೀವಿಗಳಾದ ಇತರ ಹತ್ತು ಮಂದಿಯನ್ನು ಬಂಧಿಸಲಾಗಿದೆ ಎಂದು ಮೇಲ್ಮನವಿಯಲ್ಲಿ ತಿಳಿಸಲಾಗಿದೆ. ಭೀಮ ಕೋರೆಗಾಂವ್‌ನಲ್ಲಿ ನಡೆದ ಕೊನೆಯ ಆಂಗ್ಲೊ-ಮರಾಠಾ ಯುದ್ಧದ 200ನೇ ವರ್ಷ ನೆನಪಿಗಾಗಿ 2017ರ ಡಿಸೆಂಬರ್ 31ರಂದು ನಡೆದ ಸಭೆಗೆ ಸಂಬಂಧಿಸಿದಂತೆ ಈ ಪ್ರಕರಣವನ್ನು ದಾಖಲಿಸಲಾಗಿದೆ. ಆದರೆ ತೇಲ್ತುಂಬ್ಡೆ ಈ ಸಭೆಯಲ್ಲಿ ಭಾಗಿಯಾಗಿರಲಿಲ್ಲ ಎಂದು ಮೇಲ್ಮನವಿಯಲ್ಲಿ ತಿಳಿಸಲಾಗಿದೆ. ತೇಲ್ತುಂಬ್ಡೆ ವಿರುದ್ಧ ಪುಣೆ ಪೊಲೀಸರು ದಾಖಲಿಸಿರುವ ಸುಳ್ಳು ದೂರುಗಳನ್ನು ಕೂಡಲೇ ವಾಪಸ್ ಪಡೆದುಕೊಳ್ಳಬೇಕು. ಅವರು ಭಾರತದ ಪ್ರಮುಖ ಸಮಕಾಲೀನ ಬುದ್ಧಿಜೀವಿಗಳಲ್ಲಿ ಒಬ್ಬರು ಮತ್ತು ಅಂತರ್‌ರಾಷ್ಟ್ರೀಯ ಖ್ಯಾತಿಯ ಲೇಖಕರು ಎಂದು ಮನವಿಯಲ್ಲಿ ತಿಳಿಸಲಾಗಿದೆ.