ಅಮೆರಿಕ ಸರಕಾರ ಬಂದ್ ಹಿಂದೆಗೆದ ಟ್ರಂಪ್

Update: 2019-01-26 16:56 GMT

► ಮೆಕ್ಸಿಕೊ ಗೋಡೆ ನಿರ್ಮಾಣದ ಬಿಗಿನಿಲುವಿನಿಂದ ಹಿಂದೆ ಸರಿದ ಅಮೆರಿಕ ಅಧ್ಯಕ್ಷ

► ಮೂರು ವಾರಗಳ ಅವಧಿಯೊಳಗೆ ಬಿಕ್ಕಟ್ಟು ಬಗೆಹರಿಸುವಂತೆ ಡೆಮಾಕ್ರಟರಿಗೆ ಟ್ರಂಪ್ ಸೂಚನೆ

ಹೊಸದಿಲ್ಲಿ,ಜ.26  : ಕೊನೆಗೂ ಹೆಚ್ಚುತ್ತಿರುವ ಒತ್ತಡಕ್ಕೆ ಮಣಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೂರು ವಾರಗಳ ಅವಧಿಗೆ ಸರಕಾರವನ್ನು ಪುನಾರಂಭಿಸುವ ವಿಧೇಯಕಕ್ಕೆ ಶುಕ್ರವಾರ ಸಹಿಹಾಕಿದ್ದಾರೆ. ಇದರೊಂದಿಗೆ ಕೇಂದ್ರ ಸರಕಾರದ ಇಲಾಖೆಗಳ ಕಾರ್ಯನಿರ್ವಹಣೆ ಪುನಾರಂಭಿಸಬೇಕಾದರೆ, ಮೆಕ್ಸಿಕೋ ಗಡಿಗೆ ಗೋಡೆ ನಿರ್ಮಿಸಲು ಅಮೆರಿಕ ಕಾಂಗ್ರೆಸ್ ಅನುದಾನ ಒದಗಿಸಬೇಕೆಂಬ ತನ್ನ ಬೇಡಿಕೆಯಿಂದ ಅವರು ಹಿಂದೆ ಸರಿದಂತಾಗಿದೆ.

ಈ ಬಗ್ಗೆ ಶ್ವೇತಭವನದ ಉದ್ಯಾನವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ಫೆಬ್ರವರಿ 15ರವರೆಗೆ ಸರಕಾರದ ಇಲಾಖೆಗಳು ಕಾರ್ಯಾಚರಿಸಲು ಬೇಕಾದ ಆರ್ಥಿಕ ನಿಧಿಯನ್ನು ಒದಗಿಸುವ ಮಸೂದೆಗೆ ತಾನು ಸಹಿಹಾಕುವುದಾಗಿ ತಿಳಿಸಿದರು. ಆದರೆ ಈ ಅವಧಿಯಲ್ಲಿ ತನ್ನ ಬಹುಕಾಲದ ಬೇಡಿಕೆಯಾದ ಮೆಕ್ಸಿಕೋ ಗೋಡೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಒಪ್ಪಿಗೆ ನೀಡುವಂತೆ, ಅಮೆರಿಕ ಕಾಂಗ್ರೆಸ್‌ನ ಸಂಸದರ ಮನವೊಲಿಸುವುದಾಗಿ ಅವರು ಹೇಳಿದರು.

ಸರಕಾರಿ ಇಲಾಖೆಗಳ ಕಾರ್ಯನಿರ್ವಹಣೆಯನ್ನು ಪುನಾರಂಭಿಸುವ ನಿಟ್ಟಿನಲ್ಲಿ ಟ್ರಂಪ್ ಅವರ ಒಪ್ಪಂದಕ್ಕೆ ಮೊದಲಿಗೆ ಅಮೆರಿಕ ಸೆನೆಟ್ ಹಾಗೂ ಆನಂತರ ಪ್ರತಿನಿಧಿ ಸಭೆ ಅವಿರೋಧವಾಗಿ ಅನುಮೋದನೆ ನೀಡಿದವು. ಶುಕ್ರವಾರ ತಡರಾತ್ರಿ ಅವರು ಈ ವಿಧೇಯಕಕ್ಕೆ ಸಹಿಹಾಕಿದ್ದಾರೆ. ಎಲ್ಲಾ ಸರಕಾರಿ ಕಚೇರಿಗಳನ್ನು ಸಮರ್ಪಕವಾಗಿ ಹಾಗೂ ಶಿಸ್ತುಬದ್ಧವಾದ ರೀತಿಯಲ್ಲಿ ಪುನಾರಂಭಿಸುವಂತೆ ಹಾಗೂ ಉದ್ಯೋಗಿಗಳು ಕರ್ತವ್ಯಕ್ಕೆ ಮಳುವಂತೆಯೂ ಅಮೆರಿಕ ಆಡಳಿತವು ಫೆೆಡರಲ್ ಇಲಾಖೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿದೆ.

ಅಮೆರಿಕ ಆಡಳಿತ ಭಾಗಶಃ ಸ್ಥಗಿತಗೊಂಡ35 ದಿನಗಳ ಬಳಿಕ ಟ್ರಂಪ್ ತನ್ನ ಬಿಗಿನಿಲುವಿನಿಂದ ಹಿಂದೆ ಸರಿದಿದ್ದಾರೆ. ಆಡಳಿತದ ಬಂದ್‌ನಿಂದಾಗಿ ದೇಶದ ವಿಮಾನನಿಲ್ದಾಣಗಳಲ್ಲಿ ವಿಮಾನಗಳ ಹಾರಾಟದಲ್ಲಿ ವಿಳಂಬವುಂಟಾಗಿದೆ ಹಾಗೂ ಸಾವಿರಾರು ಸರಕಾರಿ ಉದ್ಯೋಗಿಗಳು ವೇತನದಿಂದ ವಂಚಿತರಾಗಿದ್ದರು. ಪರಿಸ್ಥಿತಿಯ ಗಂಭೀರತೆಯನ್ನರಿತ ಟ್ರಂಪ್, ಸರಕಾರಿ ಇಲಾಖೆಗಳನ್ನು ಮೂರು ವಾರಗಳ ಮಟ್ಟಿಗೆ ತೆರೆದಿಡುವುದಾಗಿ ತಿಳಿಸಿದ್ದಾರೆ.

ಮೊದಲಿಗೆ ಸರಕಾರದ ಕಾರ್ಯನಿರ್ವಹಣೆ ಪುನಾರಂಭಗೊಳ್ಳಬೇಕು. ಆನಂತರವಷ್ಟೇ ಗಡಿಭದ್ರತೆ ಬಗ್ಗೆ ಮಾತುಕತೆ ಆರಂಭಿಸುವ ಎಂದು ಪ್ರತಿಪಕ್ಷ ಡೆಮಾಕ್ರಟರು ಪಟ್ಟು ಹಿಡಿದಿದ್ದರು. ಅಮೆರಿಕ ಕಾಂಗ್ರೆಸ್ ಜೊತೆ ನ್ಯಾಯಯುತವಾದ ಒಪ್ಪಂದವೇರ್ಪಡದೇ ಇದ್ದಲ್ಲಿ ಫೆಬ್ರವರಿ 15ರ ಆನಂತರ ಮತ್ತೊಮ್ಮೆ ಸರಕಾರ ಮುಚ್ಚುಗಡೆಗೊಳ್ಳಲಿದೆ. ಆಗ ಈ ತುರ್ತುಸ್ಥಿತಿಯನ್ನು ನಿಭಾಯಿಸಲು ನನಗೆ ಅಮೆರಿಕದ ಸಂವಿಧಾನ ಹಾಗೂ ಕಾನೂನು ನೀಡಿರುವ ಎಲ್ಲಾ ರೀತಿಯ ಅಧಿಕಾರಗಳನ್ನು ನಾನು ಬಳಸಿಕೊಳುತ್ತೇನೆ.

ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News