ಟ್ರಂಪ್ ಆಡಳಿತ ವೈಖರಿಗೆ ಶೇ.58 ನಾಗರಿಕರ ಅತೃಪ್ತಿ: ವಾಶಿಂಗ್ಟನ್‌ಪೋಸ್ಟ್-ಎಬಿಸಿ ಸಮೀಕ್ಷೆ ಬಹಿರಂಗ

Update: 2019-01-26 16:27 GMT

ವಾಶಿಂಗ್ಟನ್,ಜ.26: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಕಾರ್ಯನಿರ್ವಹಣೆ ಬಗ್ಗೆ ಶೇ. 58ರಷ್ಟು ಅಮೆರಿಕನ್ ನಾಗರಿಕರು ತಮ್ಮ ಅಸಮತಿ ವ್ಯಕ್ತಪಡಿಸಿದ್ದಾರೆಂದು ಜನಾಭಿಪ್ರಾಯ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಕಳೆದ ಮೂರು ತಿಂಗಳುಗಳಲ್ಲಿ ಟ್ರಂಪ್ ಅವರ ಕಾರ್ಯನಿರ್ವಹಣೆಯನ್ನು ಒಪ್ಪದ ನಾಗರಿಕರ ಸಂಖ್ಯೆಯಲ್ಲಿ ಶೇ.5ರಷ್ಟು ಏರಿಕೆಯಾಗಿದೆಯೆಂದು ವಾಶಿಂಗ್ಟನ್‌ಪೋಸ್ಟ್- ಎಬಿಸಿ ನ್ಯೂಸ್ ಸುದ್ದಿಸಂಸ್ಥೆಗಳು ನಡೆಸಿದ ಜಂಟಿ ಸಮೀಕ್ಷೆ ತಿಳಿಸಿದೆ.

ಅಮೆರಿಕವು 35 ದಿನಗಳ ಕಾಲ ಎದುರಿಸಿದ್ದ ಸರಕಾರಿ ಆಡಳಿತದ ಭಾಗಶ ಸ್ಥಗಿತಕ್ಕೆ ಡೊನಾಲ್ಡ್ ಟ್ರಂಪ್ ಹಾಗೂ ರಿಪಬ್ಲಿಕನ್ ಸದಸ್ಯರು ಕಾರಣರೆಂದು ಭಾರೀಸಂಖ್ಯೆಯ ಅಮೆರಿಕನ್ನರು ಅಭಿಪ್ರಾಯಿಸಿದ್ದಾರೆ.

ದಾಖಲೆಯ ದಿನಗಳವರೆಗೆ ನಡೆದ ಅಮೆರಿಕ ಸರಕಾರದ ಶಟ್‌ಡೌನ್‌ನಿಂದಾಗಿ ತಮಗೆ ವೈಯಕ್ತಿಕವಾಗಿ ಅನನುಕೂಲವಾಗಿದೆಯೆಂದು ಪ್ರತಿ ಐವರು ಅಮೆರಿಕನ್ನರಲ್ಲಿ ಒಬ್ಬಾತ ಹೇಳಿಕೊಂಡಿದ್ದಾರೆ.ಟ್ರಂಪ್ ಅವರ ಒಟ್ಟಾರೆ ಜನಪ್ರಿಯತೆಯಲ್ಲೂ ತೀವ್ರ ಕುಸಿತವುಂಟಾಗಿರುವುದನ್ನು ಕೂಡಾ ಈ ಸಮೀಕ್ಷೆಯು ಬೆಟ್ಟು ಮಾಡಿ ತೋರಿಸಿದೆ. ಶೇ. 37ರಷ್ಟು ಮಂದಿ ಟ್ರಂಪ್ ಅವರ ಕಾರ್ಯನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಶೇ.58ರಷ್ಟು ಮಂದಿ ವಿರೋಧಿಸಿದ್ದಾರೆಂದು ಸಮೀಕ್ಷೆಯು ತಿಳಿಸಿದೆ.

ಕಳೆದ ನವೆಂಬರ್‌ನಲ್ಲಿ ಅಮೆರಿಕದ ಪ್ರತಿನಿಧಿ ಸಭಾದ ಮೇಲೆ ಪ್ರತಿಪಕ್ಷ ಡೆಮಾಕ್ರಟರು ನಿಯಂತ್ರಣ ಸಾಧಿಸುವುದಕ್ಕೆ ಮುನ್ನ ವಾಶಿಂಗ್ಟನ್ ಪೋಸ್ಟ್- ಎಬಿಸಿ ನ್ಯೂಸ್ ನಡೆಸಿದ ಸಮೀಕ್ಷೆಯಲ್ಲಿ, ಟ್ರಂಪ್ ಅವರ ಕಾಯನಿರ್ವಹಣೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಅಮೆರಿಕನ್ ನಾಗರಿಕರ ಪ್ರಮಾಣವು ಶೇ. 40ರಿಂದ ಶೇ.53ಕ್ಕೆ ಏರಿಕೆಯಾಗಿರುವುದು ಕಂಡುಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News