ಆರ್ಥಿಕ ಅಪರಾಧಿಗಳನ್ನು ವೆಸ್ಟ್ ಇಂಡೀಸ್ ನಿಂದ ಕರೆತರಲು ಏರ್‌ಇಂಡಿಯಾದ ವಿಮಾನ ಸಿದ್ಧ

Update: 2019-01-26 17:13 GMT

 ಹೊಸದಿಲ್ಲಿ, ಜ.26: ದೇಶದಲ್ಲಿ ಬೃಹತ್ ಪ್ರಮಾಣದ ಆರ್ಥಿಕ ವಂಚನೆ ಎಸಗಿ ಇಲ್ಲಿಂದ ಪರಾರಿಯಾಗಿ ವೆಸ್ಟ್ ಇಂಡೀಸ್ ‌ನ ಪೌರತ್ವ ಪಡೆದಿರುವವರನ್ನು ಮರಳಿ ಕರೆತರಲು ಏರ್‌ಇಂಡಿಯಾದ ದೂರವ್ಯಾಪ್ತಿಯ ವಿಮಾನವೊಂದರ ವ್ಯವಸ್ಥೆ ಮಾಡಿರುವುದಾಗಿ ಸರಕಾರದ ಉನ್ನತ ಮೂಲಗಳು ತಿಳಿಸಿವೆ.

ವಜ್ರೋದ್ಯಮಿ ಮೆಹುಲ್ ಚೋಕ್ಸಿ, ವಿನ್ಸಮ್ ಡೈಮಂಡ್ಸ್‌ನ ನಿರ್ದೇಶಕ ಜತಿನ್ ಮೆಹ್ತಾ ದೇಶದಲ್ಲಿ ಆರ್ಥಿಕ ವಂಚನೆ ಎಸಗಿ ವೆಸ್ಟ್ ಇಂಡೀಸ್ ನ ಪೌರತ್ವ ಪಡೆದಿದ್ದಾರೆ. ವೆಸ್ಟ್ ಇಂಡೀಸ್ ನಲ್ಲಿ ‘ಪಾವತಿ ಪೌರತ್ವ ಯೋಜನೆ’ಯಡಿ ಹಣ ಪಾವತಿಸಿ ಆ ದೇಶದ ಪೌರತ್ವ ಪಡೆಯುವ ಸೌಲಭ್ಯವನ್ನು ಇವರಿಬ್ಬರು ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇವರನ್ನು ಮರಳಿ ಕರೆತರುವ ಪ್ರಕ್ರಿಯೆಗಾಗಿ ದೂರವ್ಯಾಪ್ತಿಯ ಏರ್‌ಇಂಡಿಯಾ ಬೋಯಿಂಗ್ ವಿಮಾನವನ್ನು ವ್ಯವಸ್ಥೆಗೊಳಿಸಲಾಗಿದ್ದು ಸಿಬಿಐ ಮತ್ತು ಇಡಿ(ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಶೀಘ್ರವೇ ವೆಸ್ಟ್ ಇಂಡೀಸ್ ಗೆ ತೆರಳಲಿದ್ದಾರೆ ಎಂದು ವರದಿಯಾಗಿದೆ. ಮೆಹ್ತಾ ಕೆಲ ವರ್ಷದ ಹಿಂದೆ ಸೈಂಟ್ ಕಿಟ್ಸ್ ಮತ್ತು ನೆವಿಸಾದ ಪೌರತ್ವ ಪಡೆದಿದ್ದರೆ ಚೋಕ್ಸಿ ಇತ್ತೀಚೆಗಷ್ಟೇ ಅಂಟಿಗಾ ಮತ್ತು ಬಾರ್ಬಡೋಸ್‌ನ ಪೌರತ್ವ ಪಡೆದಿದ್ದಾರೆ. ಚೋಕ್ಸಿ ಮತ್ತು ನೀರವ್ ಮೋದಿಯನ್ನು ಮರಳಿ ಕರೆತರುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಆದರೆ ಮೋದಿ ವೆಸ್ಟ್ ಇಂಡೀಸ್ ದ್ವೀಪಗಳಲ್ಲಿ ಇದ್ದಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಸಕ್ರಮ ಪಾಸ್‌ಪೋರ್ಟ್ ತೋರಿಸಿ 1 ಲಕ್ಷ ಅಮೆರಿಕನ್ ಡಾಲರ್ ಪಾವತಿಸಿದರೆ ವೆಸ್ಟ್ ಇಂಡೀಸ್ ನ ಡೊಮಿನಿಕಾ ಮತ್ತು ಸೈಂಟ್ ಲೂಸಿಯಾದ ಪೌರತ್ವ ಲಭಿಸುತ್ತದೆ. ಇದೇ ವೇಳೆ ಸಂಗಾತಿಗೆ(ಪತಿ/ಪತ್ನಿ) ಪೌರತ್ವ ಬೇಕಿದ್ದರೆ ಡೊಮಿನಿಕಾದಲ್ಲಿ 1,75,000 ಅಮೆರಿಕನ್ ಡಾಲರ್ ಹಾಗೂ ಸೈಂಟ್ ಲೂಸಿಯಾದಲ್ಲಿ 1,65,000 ಅಮೆರಿಕನ್ ಡಾಲರ್ ಪಾವತಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News