ಪಟ್ಟಾ ಪಡೆಯಲು ತಹಶೀಲ್ದಾರ್‌ಗೆ ಲಂಚ ನೀಡಲು ಭಿಕ್ಷೆ ಬೇಡಿದ ದಂಪತಿ

Update: 2019-01-26 17:20 GMT

ಹೈದರಾಬಾದ್, ಜ. 26: ತಮ್ಮ 9 ಎಕರೆ ಭೂಮಿಗೆ ಪಟ್ಟಾ ನೀಡಲು ಸ್ಥಳೀಯ ತಹಶೀಲ್ದಾರ್ (ಕಂದಾಯ ಅಧಿಕಾರಿ) ಲಂಚಕ್ಕೆ ಬೇಡಿಕೆ ಒಡ್ಡಿದ ಬಳಿಕ ಲಂಚ ನೀಡಲು ದಂಪತಿ ಭಿಕ್ಷೆ ಬೇಡಿದ ಘಟನೆ ತೆಲಂಗಾಣದ ಜಯಶಂಕರ್ ಭೂಪಲ್ಪಳ್ಳಿ ಜಿಲ್ಲೆಯಲ್ಲಿ ನಡೆದಿದೆ. ಅಝಂನಗರದ ನಿವಾಸಿಗಳಾದ ಮಾಂತು ಬಸವಯ್ಯ (75) ಹಾಗೂ ಪತ್ನಿ ಲಕ್ಷ್ಮೀ (70) ಕೈಯಲ್ಲಿ ಚೀಲ ಹಿಡಿದುಕೊಂಡು, ಕುತ್ತಿಗೆಗೆ ಘೋಷಣಾ ಫಲಕ ತೂಗಿಸಿಕೊಂಡು ತಹಶೀಲ್ದಾರ್‌ಗೆ ಲಂಚ ಕೊಡಲು ಹಣ ನೀಡುವಂತೆ ಬೇಡುವ ದೃಶ್ಯದ ವೀಡಿಯೊ ಹಾಗೂ ಚಿತ್ರ ಸಾಮಾಜಿಕ ಜಾಲ ತಾಣದಲ್ಲಿ ಶುಕ್ರವಾರ ವೈರಲ್ ಆಗಿದೆ.

ಈ ಘಟನೆ ನಡೆದ ಗಂಟೆಗಳ ಬಳಿಕ ಜಿಲ್ಲಾಧಿಕಾರಿ ವಾಸಮ್ ವೆಂಕಟೇಶ್ವರಲು ಈ ವಿಷಯದ ಬಗ್ಗೆ ವಿಚಾರಿಸುವಂತೆ ಭೂಪಲ್ಪಳ್ಳಿ ಕಂದಾಯ ವಿಭಾಗೀಯ ಅಧಿಕಾರಿ ಇ. ವೆಂಕಟಾಚಾರ್ಯರಿಗೆ ನಿರ್ದೇಶಿಸಿದ್ದಾರೆ ಹಾಗೂ ದಂಪತಿಗೆ ಪಟ್ಟಾ ಹಸ್ತಾಂತರಿಸುವ ಭರವಸೆ ನೀಡಿದ್ದಾರೆ. ಸಂಜೆ ಕಂದಾಯ ಅಧಿಕಾರಿಗಳು ದಂಪತಿಯ ಕಡತದ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ತನ್ನ ಕಚೇರಿಗೆ ದಂಪತಿಯನ್ನು ಕರೆಸಿಕೊಂಡ ಕಂದಾಯ ವಿಭಾಗೀಯ ಅಧಿಕಾರಿ ವೆಂಕಟಾಚಾರ್ಯ 4.10 ಎಕರೆ ಭೂಮಿಯ ಪಟ್ಟಾ ನೀಡಿದ್ದಾರೆ. ಉಳಿದ ಭೂಮಿ ಕಾನೂನು ವಿವಾದದಲ್ಲಿ ಇದೆ. ಅದು ಪೂರ್ಣಗೊಂಡ ಕೂಡಲೇ ಹಸ್ತಾಂತರಿಸಲಾಗುವುದು ಎಂದು ಅವರಿಗೆ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News