×
Ad

ರಫೇಲ್ ರಹಸ್ಯಗಳ ಹಿಡಿದು ಪ್ರಧಾನಿ ಮೇಲೆ ಹಿಡಿತ ಸಾಧಿಸಿರುವ ಪಾರಿಕ್ಕರ್: ರಾಹುಲ್ ಗಾಂಧಿ

Update: 2019-01-28 21:56 IST

ಹೊಸದಿಲ್ಲಿ,ಜ.28: ರಫೇಲ್ ಯುದ್ಧವಿಮಾನ ಒಪ್ಪಂದಕ್ಕೆ ಸಂಬಂಧಪಟ್ಟ ಕೆಲವು ರಹಸ್ಯ ದಾಖಲೆಗಳನ್ನು ಹೊಂದಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ತನ್ನ ಹುದ್ದೆಯನ್ನು ಉಳಿಸುವ ಸಲುವಾಗಿ ಅವುಗಳನ್ನು ಪ್ರಧಾನಿ ಮೋದಿ ಮೇಲೆ ಹಿಡಿತ ಸಾಧಿಸಲು ಬಳಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

59,000 ಕೋಟಿ ರೂ. ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳು ಮನೋಹರ್ ಪಾರಿಕ್ಕರ್ ಬಳಿಯಿದೆ ಎಂದು ಗೋವಾ ಸಚಿವರ ಹೇಳಿಕೆಯುಳ್ಳ ಧ್ವನಿಮುದ್ರಣವೊಂದು ಲಭಿಸಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಈ ಆರೋಪ ಮಾಡಿದ್ದಾರೆ.

ಈ ಟೇಪ್ ಅಧಿಕೃತವಾಗಿದ್ದು ಮನೋಹರ್ ಪಾರಿಕ್ಕರ್ ಬಳಿಯಿರುವ ರಫೇಲ್ ಸಂಬಂಧಿ ದಾಖಲೆಗಳನ್ನು ಅವರು ತನ್ನ ಮುಖ್ಯಮಂತ್ರಿ ಸ್ಥಾನವನ್ನು ಉಳಿಸಲು ಮೋದಿ ವಿರುದ್ಧ ದಾಳವಾಗಿ ಬಳಸುತ್ತಿದ್ದಾರೆ ಎಂದು ಸದ್ಯ ಗೋವಾದಲ್ಲಿ ವಿಶ್ರಾಂತಿ ಪಡೆಯುತ್ತಿರುವ ರಾಹುಲ್ ಗಾಂಧಿ ತಿಳಿಸಿದ್ದಾರೆ. ಈ ಟೇಪ್‌ನಲ್ಲಿ ಮಾತನಾಡಿರುವ ಸಚಿವ ವಿಶ್ವಜಿತ್ ರಾಣೆ ಇದು ತಿರುಚಲ್ಪಟ್ಟ ಧ್ವನಿಮುದ್ರಣವಾಗಿದೆ ಎಂದು ಆರೋಪಿಸಿದ್ದಾರೆ.

36 ರಫೇಲ್ ಯುದ್ಧವಿಮಾನಕ್ಕೆ ಸಂಬಂಧಿಸಿ ಭಾರತ ಮತ್ತು ಫ್ರಾನ್ಸ್ ಮಧ್ಯೆ ಒಪ್ಪಂದ ನಡೆದ ಸಮಯದಲ್ಲಿ ರಕ್ಷಣಾ ಸಚಿವರಾಗಿದ್ದ ಮನೋಹರ್ ಪಾರಿಕ್ಕರ್ ಕೂಡಾ ಈ ಟೇಪ್ ವಾಸ್ತವವನ್ನು ತಿರುಚಲು ಮಾಡಿರುವ ಹತಾಶ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದಾರೆ. ಆದರೆ ಕಾಂಗ್ರೆಸ್ ಈ ಟೇಪ್ ಅಧಿಕೃತ ಎಂದು ವಾದಿಸಿದೆ. ಸಂಸತ್‌ನಲ್ಲಿ ಈ ಧ್ವನಿಮುದ್ರಣವನ್ನು ಕೇಳಿಸಲು ಅವಕಾಶ ನೀಡುವಂತೆ ರಾಹುಲ್ ಗಾಂಧಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಲ್ಲಿ ಮನವಿಯ ಮಾಡಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ ಈ ಟೇಪ್ ನಕಲಿ ಮತ್ತು ತಿರುಚಲ್ಪಟ್ಟಿದೆ, ಸಾಧ್ಯವಿದ್ದರೆ ಕಾಂಗ್ರೆಸ್ ಅಧ್ಯಕ್ಷ ಈ ಟೇಪ್ ಅಧಿಕೃತ ಎಂದು ಸಾಬೀತುಪಡಿಸಲು ಎಂದು ಸವಾಲೆಸೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News