ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶದಿಂದ ಬಿಜೆಪಿಗೆ ಆತಂಕ: ಕಮಲ್ ನಾಥ್
ಭೋಪಾಲ್, ಜ. 28: ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶಿಸುವ ಬಗ್ಗೆ ಬಿಜೆಪಿ ಆತಂಕಗೊಂಡಿದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ರವಿವಾರ ಹೇಳಿದ್ದಾರೆ. ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶಿಸುವ ಬಗ್ಗೆ ಆತಂಕಗೊಂಡಿರುವುದರಿಂದಲೇ ಅದು ವಿವಿಧ ಹೇಳಿಕೆಗಳನ್ನು ನೀಡುತ್ತಿದೆ. ಅದು ಅವರ ವೈಯಕ್ತಿಕ ವಿಚಾರ. ಅವರಿಗೆ ಹೊಟ್ಟೆಯುರಿ ಏಕೆ ಎಂದು ಅರ್ಥವಾಗುತ್ತಿಲ್ಲ ಎಂದು ಕಮಲ್‌ನಾಥ್ ಭೋಪಾಲದಲ್ಲಿ ಮಾಧ್ಯಮದವರಿಗೆ ತಿಳಿಸಿದರು.
ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶಿಸುತ್ತಾರೆ ಎಂದು ಹಲವು ವರ್ಷಗಳಿಂದಲೇ ನಿರೀಕ್ಷಿಸಲಾಗಿತ್ತು. ಉತ್ತರಪ್ರದೇಶ ಪೂರ್ವ ಭಾಗಕ್ಕೆ ಪ್ರಿಯಾಂಕಾ ಗಾಂಧಿ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡುವ ಮೂಲಕ ನಿರೀಕ್ಷೆ ನಿಜವಾಗಿದೆ. ರೈತರ ಸಾಲ ಮನ್ನಾ ಕುರಿತು ಪ್ರಶ್ನಿಸಿದಾಗ ಉತ್ತರಿಸಿದ ಕಮಲ್ ನಾಥ್, ರೈತರ ಹೆಸರಿನಲ್ಲಿ ನಕಲಿ ಸಾಲಗಳನ್ನು ನೀಡಲಾಗಿದೆ. ಈ ಭ್ರಷ್ಟಾಚಾರ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದೆ. ಈ ವಿಷಯದ ಕುರಿತು ಕ್ರಿಮಿನಲ್ ತನಿಖೆ ನಡೆಸಬೇಕು. ನಾವು ವಿವಿಧ ಜಿಲ್ಲೆಗಳಿಂದ ಮಾಹಿತಿ ಸ್ವೀಕರಿಸಿದ್ದೇವೆ. ಈ ಭ್ರಷ್ಟಾಚಾರದ ಒಟ್ಟು ಮೊತ್ತ 1000 ಕೋ. ರೂ. ಆಗಬಹುದು ಎಂದು ಅವರು ಹೇಳಿದರು.