ಧರ್ಮನಿಂದನೆ ಪ್ರಕರಣ: ಪಾಕ್ ಸುಪ್ರೀಂಕೋರ್ಟ್‌ನಿಂದ ಅಸಿಯಾ ದೋಷಮುಕ್ತಿ ತೀರ್ಪಿನ ಮರುಪರಿಶೀಲನೆ

Update: 2019-01-28 17:33 GMT

ಇಸ್ಲಾಮಾಬಾದ್,ಜ.28: ಧರ್ಮನಿಂದನೆಯ ಪ್ರಕರಣದಲ್ಲಿ ಕ್ರೈಸ್ತ ಮಹಿಳೆ ಅಸಿಯಾ ಬೀಬಿಯನ್ನು ದೋಷಮುಕ್ತಗೊಳಿಸಿದ ತನ್ನ ತೀರ್ಪಿನ ಮರುಪರಿಶೀಲನೆ ಯನ್ನು ಪಾಕಿಸ್ತಾನದ ಸುಪ್ರೀಂಕೋರ್ಟ್ ಮಂಗಳವಾರ ಆರಂಭಿಸಲಿದೆ.

ಧರ್ಮ ನಿಂದನೆಗಾಗಿ ಮರಣದಂಡನೆ ವಿಧಿಸಲ್ಪಟ್ಟಿರುವ ಅಸಿಯಾ ಬೀಬಿ, ಈವರೆಗೆ 8 ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾಳೆ. ಆದರೆ ಸುಪ್ರೀಂಕೋರ್ಟ್ ಕಳೆದ ಆಕ್ಟೋಬರ್‌ನಲ್ಲಿ ದೋಷಮುಕ್ತಿಗೊಳಿಸಿದಾಗಿನಿಂದ ಆಕೆ ತಲೆಮರೆಸಿಕೊಂಡಿದ್ದಾರೆ. ಕೆಲವು ತೀವ್ರವಾದಿ ಧಾರ್ಮಿಕ ಸಂಘಟನೆಗಳು ಆಕೆಗೆ ಮರಣದಂಡನೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ ಹಾಗೂ ಆಕೆ ದೇಶಬಿಟ್ಟು ತೆರಳದಂತೆ ತಡೆಹಿಡಿಯಬೇಕೆಂದು ಪಾಕ್ ಸರಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ.

ತನ್ನ ತೀರ್ಪಿನ ಮರುಪರಿಶೀಲನೆ ಕೋರಿ ಸಲ್ಲಿಸುವ ಬಹುತೇಕ ಅರ್ಜಿಗಳನ್ನು ಪಾಕ್ ಸುಪ್ರೀಂಕೋರ್ಟ್ ತಳ್ಳಿಹಾಕುತ್ತಿದೆ. ಆದರೆ ಈ ಪ್ರಕರಣ ರಾಜಕೀಯ ಸ್ವರೂಪವನ್ನು ಹೊಂದಿರುವುದರಿಂದ, ಸುಪ್ರೀಂಕೋರ್ಟ್ ಈ ವಿಷಯವನ್ನು ಮತ್ತೆ ಮರುಪರಿಶೀಲನೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆಯೆನ್ನಲಾಗಿದೆ.

ಮುಖ್ಯ ನ್ಯಾಯಮೂರ್ತಿ ಅಸೀಫ್ ಸಯೀದ್ ಖೋಸಾ ನೇತೃತ್ವದ ತ್ರಿಸದಸ್ಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸಲಿದೆ. ತನ್ನ ಸುರಕ್ಷತೆಯ ಭೀತಿಯಿಂದ ಕಳೆದ ವರ್ಷ ಯುರೋಪ್‌ಗೆ ಪಲಾಯನಗೈದಿರುವ ಅಸಿಯಾ ಬೀಬಿಯ ವಕೀಲರಾದ ಸಯೀಫುಲ್ ಮಲೂಕ್ ಅವರು ಈ ಮರುಪರಿಶೀಲನೆ ಅರ್ಜಿಯು ವಜಾಗೊಳ್ಳುವುದೆಂದು ನಿರೀಕ್ಷಿಸುವುದಾಗಿ ಹೇಳಿದ್ದಾರೆ.

ಮಲೂಕ್ ಈ ವಾರಾಂತ್ಯದಲ್ಲಿ ಪಾಕ್‌ಗೆ ವಾಪಾಸಾಗಿದ್ದು, ಅಸಿಯಾ ಬೀಬಿಯ ಪರವಾಗಿ ಮತ್ತೆ ಅವರು ವಾದಿಸಲಿದ್ದಾರೆ.ಸುರಕ್ಷತೆಯ ಕಾರಣಗಳಿಗಾಗಿ ಅಸಿಯಾ ಬೀಬಿ ವಿದೇಶದಲ್ಲಿ ಆಶ್ರಯ ಕೋರುವ ಸಾಧ್ಯತೆಯಿದೆ. ಅಸಿಯಾ ಬೀಬಿಗೆ ನೆರವಾಗುವ ನಿಟ್ಟಿನಲ್ಲಿ ತಾನು ಪಾಕ್ ಸರಕಾರದ ಸಂಪರ್ಕದಲ್ಲಿರುವುದಾಗಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ನವೆಂಬರ್‌ನಲ್ಲಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News