ಇದು ನಮ್ಮ ಅಮೆರಿಕವಲ್ಲ: ಟ್ರಂಪ್ ವಿರುದ್ಧ ಕಮಲಾ ಹ್ಯಾರಿಸ್ ವಾಗ್ದಾಳಿ

Update: 2019-01-28 17:36 GMT

ವಾಶಿಂಗ್ಟನ್,ಜ.28: ಡೊನಾಲ್ಡ್ ಟ್ರಂಪ್ ಆಡಳಿತದ ಅಮೆರಿಕದಲ್ಲಿ, ಅಮೆರಿಕದ ಕನಸು ಹಾಗೂ ಅದರ ಪ್ರಜಾಪ್ರಭುತ್ವವು ದಾಳಿಗೊಳಗಾಗಿದೆಯೆಂದು, ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿಯಾಗುವ ಆಕಾಂಕ್ಷಿ ಕಮಲಾ ಹ್ಯಾರಿಸ್ ಹೇಳಿದ್ದಾರೆ.

ಕ್ಯಾಲಿಫೋರ್ನಿಯಾ ಸೆನೆಟರ್ ಆಗಿರುವ ಕಮಲಾ ಹ್ಯಾರಿಸ್ 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ತಾನು ಸ್ಪರ್ಧಿಸುವ ಆಕಾಂಕ್ಷೆ ಹೊಂದಿರುವುದಾಗಿ ಘೋಷಿಸಿದ್ದರು. 2011ರಿಂದ 2017ರವರೆಗೆ ಕ್ಯಾಲಿಫೋರ್ನಿಯಾದ ಆಟಾರ್ನಿ ಜನರಲ್ ಆಗಿದ್ದ ಕಮಲಾ ಹ್ಯಾರಿಸ್ ಅವರು, ಸ್ಯಾನ್‌ ಫ್ರಾನ್ಸಿಸ್ಕೊದ ಓಕ್‌ ಲ್ಯಾಂಡ್‌ನ ಸಿಟಿಹಾಲ್‌ನಲ್ಲಿ ತನ್ನ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಆಕೆ ಈ ಘೋಷಣೆಯನ್ನು ಮಾಡಿದ್ದರು. ‘‘ಅಮೆರಿಕದ ಕನಸು ಹಾಗೂ ನಮ್ಮ ಅಮರಿಕದ ಪ್ರಜಾಪ್ರಭುತ್ವವು ಹಿಂದೆಂದೂ ಇಲ್ಲದಂತಹ ರೀತಿಯಲ್ಲಿ ದಾಳಿಗೊಳಗಾಗಿದೆ. ನಮ್ಮ ಪ್ರಜಾತಾಂತ್ರಿಕ ಮೌಲ್ಯಗಳು ಜಗತ್ತಿನಾದ್ಯಂತ ದಾಳಿಗೊಳಾಗಿರುವಾಗ, ಸರ್ವಾಧಿಕಾರವು ದಾಪುಗಾಲಿಡುತ್ತಿರುವಾಗ, ಅಣ್ವಸ್ತ್ರ ಪ್ರಸರಣೆಯು ಉಲ್ಬಣಿಸಿರುವಾಗ, ಮಾಲ್‌ವೇರ್‌ನಂತೆ ವಿದೇಶಿ ಶಕ್ತಿಗಳು ಶ್ವೇತಭವನಕ್ಕೆ ಸೋಂಕುಂಟು ಮಾಡಿರುವಾಗ, ನಾವು ಸತ್ಯವನ್ನು ಹೇಳೋಣ’’ ಎಂದು ಹ್ಯಾರಿಸ್ ಬೆಂಬಲಿಗರ ಹರ್ಷೋದ್ಘಾರದ ನಡುವೆ ಹೇಳಿದರು.

‘‘ಪ್ರಬಲ ಶಕ್ತಿಗಳು ನಮ್ಮ ನಡುವೆ ದ್ವೇಷ ಹಾಗೂ ಒಡಕನ್ನು ಬಿತ್ತಲು ಯತ್ನಿಸುತ್ತಿರುವಾಗ, ನಮ್ಮನ್ನು ಬೇರ್ಪಡೆಗೊಳಿಸುವುದಕ್ಕಿಂತಲೂ ಹೆಚ್ಚಾಗಿ ನಮ್ಮಲ್ಲಿ ಹೆಚ್ಚು ಸಮಾನವಾದ ಅಂಶಗಳಿವೆಯೆಂಬುದು ವಾಸ್ತವ’’ ಎಂದು ಕಮಲಾ ಹೇಳಿದರು.

ಕಮಲಾ ಅವರ ತಂದೆ ಜಮೈಕನ್ ಮೂಲದವರಾಗಿದ್ದು, ಆಕೆಯ ತಾಯಿ ಭಾರತೀಯ ಮೂಲದ ತಮಿಳರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News