ನಿರ್ಗತಿಕರ ಸೇವೆಯಲ್ಲಿ ಬ್ರದರ್ ಜೋಸೆಫ್, ಸ್ನೇಹಾಲಯದ ಕೊಡುಗೆ ಶ್ಲಾಘನೀಯ: ಬಿಷಪ್ ಪೀಟರ್ ಪೌಲ್

Update: 2019-01-29 13:21 GMT

ಮಂಜೇಶ್ವರ, ಜ. 28: ದೇವರು ಮನುಷ್ಯನನ್ನು ಸೃಷ್ಟಿಸಿದಾಗ ಉಳಿದೆಲ್ಲ ಜೀವಿಗಿಂತಲೂ ಮಿಗಿಲಾಗಿ ಆತನಿಗೆ ಕೆಲ ವಿಶೇಷ ವರದಾನಗಳನ್ನು ದಯಪಾಲಿಸಿದನು. ಆಲೋಚನ ಶಕ್ತಿ ಇದರಲ್ಲಿ ಪ್ರಮುಖವಾದುದು. ಈ ಶಕ್ತಿಯನ್ನು ಹಲವಾರು ರೀತಿಗಳಲ್ಲಿ ವಿಶ್ಲೇಷನೆಗೆ ಒಳಪಡಿಸಬಹುದಾದರೂ ಪರರ ಒಳಿತಿನ ಬಗ್ಗೆ ಆಲೋಚಿಸುವುದು ಭಗವಂತನ ಕೃಪಕಟಾಕ್ಷಗಳನ್ನು ಪಡೆಯಲು ಹೆಚ್ಚು ಸಹಕಾರಿಯಾಗುವುದು. ಬ್ರದರ್ ಜೋಸೆಫ್ ಹಾಗೂ ಅವರ ಪಂಗಡ ಕಳೆದ ಹತ್ತು ವರ್ಷಗಳಿಂದ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ನಿರ್ಗತಿಕರ ಜೀವನದ ಆಶಾಕಿರಣ ಎಂದೆನಿಸಿಕೊಂಡಿದ್ದಾರೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಪೀಟರ್ ಪೌಲ್ ಅಭಿಪ್ರಾಯಪಟ್ಟರು.

ಅವರು ಸ್ನೇಹಾಲಯ ಚಾರಿಟೇಬಲ್ ಸಂಸ್ಥೆಗಳ ದಶಮಾನೋತ್ಸವ ಆಚರಣೆಯ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡುತ್ತಿದ್ದರು.

ನಂತರ ಮಾತನಾಡಿದ ಅವರು ಮನುಷ್ಯನು ಪರಸ್ಪರ ಪ್ರೀತಿಸಲು ಕಲಿತರೆ ಜೀವಿತಾವಧಿಯಲ್ಲಿ ಆವನಿಗೆ ಖಿನ್ನತೆ ಹಾಗೂ ಏಕಾಂತತೆ ಎಂದಿಗೂ ಕಾಡುವುದಿಲ್ಲ. ಸಹ ಜೀವಿಗೆ ತನ್ನಂತೆಯೇ ಬದುಕುವ ಹಕ್ಕಿದೆ ಹಾಗೂ ತಾನು ಓರ್ವ ವ್ಯಕ್ತಿಯಾಗಿ ಆತನನ್ನು ಬದುಕಲು ಬಿಡುವ ಜವಾಬ್ದಾರಿ ತನ್ನ ಮೇಲಿದೆ ಎಂದು ಅರಿತುಕೊಂಡರೆ ಜೋಸೆಫ್ ರಂತಹ ಅನೇಕರು ಈ ಸಮಾಜದಲ್ಲಿ ಹುಟ್ಟಿ ಬರಲು ಸಾಧ್ಯವಿದೆ. ಸ್ನೇಹಾಲಯ ಎಂಬ ಸಂಸ್ಥೆಯು ಹೆಸರಿಗೆ ತಕ್ಕಂತೆ ಸ್ನೇಹ, ಪ್ರೀತಿ ಹಾಗೂ ಸೌಹಾರ್ದತೆಯನ್ನು ಸಾರುವ ಕೇಂದ್ರವಾಗಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಇಂತಹ ಸಂಸ್ಥೆಯೊಂದು ತನ್ನ ಸೇವಾವಧಿಯ ಹತ್ತು ಸಂವತ್ಸರಗಳನ್ನು ಪೂರೈಸುತ್ತಿದೆ ಎನ್ನುವುದು ನಮಗೆಲ್ಲರಿಗೂ ಹೆಮ್ಮೆ ತರುವಂತಹ ವಿಷಯವಾಗಿದೆ. ಈ ನಿಟ್ಟಿನಲ್ಲಿ ಜೋಸೆಫ್ ಕ್ರಾಸ್ತರಿಗೆ ಎಲ್ಲಾ ರೀತಿಯ ಅಭಿನಂದನೆಗಳನ್ನು ಕೋರುತ್ತೇವೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಹಾಜರಿದ್ದ ಬರೇಲಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ. ಇಗ್ನೇಶಿಯಸ್ ಡಿ ಸೋಜಾ ಸ್ನೇಹಾಲಯ ಸಂಸ್ಥೆಯು ಕೇವಲ ಹತ್ತು ವರ್ಪಗಳಲ್ಲಿ ಪಡೆದ ಯಶಸ್ವಿಯನ್ನು ಶ್ಲಾಘಿಸಿ ಸಂಸ್ಥೆಗೆ ಶುಭ ಕೋರಿದರು.

ಸಭಾ ಕಾರ್ಯಕ್ರಮದ ಮೊದಲು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಸಂತ ತೆರೇಸಾರಿಗೆ ಸಮರ್ಪಿಸಿದ ನೂತನ ದೇವಾಲಯದ ಉದ್ಘಾಟನೆಯನ್ನು ನೆರವೇರಿಸಿದರು.

ಕಾಪುಚಿನ್ ಧರ್ಮಗುರು ಸ್ವಾಮಿ ಪೌಲ್ ಮೆಲ್ವಿನ್ ಡಿ ಸೋಜಾ ನೂತನ ಗ್ರೊಟ್ಟೊ ಆಶೀರ್ವಚಿಸಿದರು. ಅನಿವಾಸಿ ಉಧ್ಯಮಿ ಮೈಕಲ್ ಡಿಸೋಜ ಪುನರ್ವಸತಿ ಕೇಂದ್ರದ ನೂತನ ಅಗ್ರಹಾರವನ್ನು ಉದ್ಘಾಟಿಸಿದರೆ , ಉಧ್ಯಮಿ ಹಾಗೂ ಇಶಾಲ್ ಫೌಂಡೇಶನ್ ಅಧ್ಯಕ್ಷ ಅಬ್ದುಲ್ ಲತೀಫ್ ಉಪ್ಪಳ ನೂತನ ಮಹಿಳಾ ಪುನರ್ವಸತಿ ಕೇಂದ್ರದ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿದರು.

ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷ ಕೆಎಂ ಅಶ್ರಫ್,  ಕಾಸರಗೋಡು ವಲಯ ಪ್ರಧಾನ ಧರ್ಮಗುರುಗಳಾದ ಫಾ. ಜೋನ್ ವಾಸ್,  ಅನಾಥಶ್ರಮ ಇಲಾಖೆಯ ಸದಸ್ಯರಾದ ಫಾ.ರೋಯ್ ಮ್ಯಾಥು, ಬೊಂದೆಲ್ ಚರ್ಚಿನ ಧರ್ಮಗುರುಗಳಾದ ಫಾ. ಆಂಡ್ರು ಲಿಯೋ ಡಿಸೋಜಾ, ಫಾ. ವರ್ಗೀಸ್ ಚಕ್ಕಲ, ಫಾ. ಕರ್ನೆಲಿಯೋ ಮೊಂತೆರೊ, ಅಬ್ದುಲ್ ಅಝೀಝ್ ಹಾಜಿ, ಅಬ್ದುಲ್ ರವೂಫ್ ಪುತ್ತಿಗೆ, ರೋಯ್ ಕಾಸ್ತೆಲಿನೋ ಹಾಗು ಇತರರು ಉಪಸ್ಥಿತರಿದ್ದರು.

ಜೋಸೆಫ್ ಕ್ರಾಸ್ತ ಸ್ವಾಗತಿಸಿ, ರೋಯ್ ಕಾಸ್ತೆಲಿನೋ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News