ಅಂಬೇಡ್ಕರ್‌ರ ಶಿಕ್ಷಣ ಉದ್ದೇಶ ಅರಿಯದೇ ದಲಿತ ಚಳವಳಿ ಸೋಲು: ಪ್ರೊ.ಅಭಯ್‌ಕುಮಾರ್

Update: 2019-01-29 16:26 GMT

ಹಿರಿಯಡಕ, ಜ.29: ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಪಾದಿಸಿದ ಶಿಕ್ಷಣ ಕಲಿಕೆಯ ಉದ್ದೇಶವನ್ನು ಸರಿಯಾಗಿ ಅರ್ಥೈಸದಿರುವುದೇ ದಲಿತ ಚಳವಳಿಯ ಸೋಲಿಗೆ ಮುಖ್ಯ ಕಾರಣ ಎಂದು ಮಂಗಳೂರು ವಿವಿ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಕೆ.ಅಭಯಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ರಾಷ್ಟ್ರೀಯ ಸೇವಾ ಯೋಜನಾ ಕೋಶ, ಮಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಇವರ ಸಂಯುಕ್ತ ಆಶ್ರಯದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ವಿಚಾರಧಾರೆ ಕುರಿತ ಎರಡು ದಿನಗಳ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅಂಬೇಡ್ಕರ್ ಅವರ ವಿಚಾರಧಾರೆಗಳ ಪ್ರಸ್ತುತ ಅಧ್ಯಯನದ ಮಾರ್ಗಗಳನ್ನು ವಿಶ್ಲೇಷಿಸಿದ ಅವರು, ಮಹಾನ್ ಚಿಂತಕರೆನಿಸಿದ ಅಂಬೇಡ್ಕರ್ ಮನುಕುಲದ ಸರ್ವರನ್ನೂ ಒಳಗೊಳ್ಳುವ ವ್ಯಕ್ತಿತ್ವ ಎಂದು ನುಡಿದರು.

ಆಶಯ ಭಾಷಣ ಮಾಡಿದ ಧಾರವಾಡದ ಸದಾಶಿವ ಮರ್ಜಿ ಅವರು, ಸಾಮಾಜಿಕ ಅನಿಷ್ಠಗಳ ನಡುವೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ವಿಮೋಚನೆ ರಾಜಕೀಯ ಪ್ರಾತಿನಿಧ್ಯದಿಂದ ಮಾತ್ರ ಸಾಧ್ಯ. ಇಂದಿನ ಎಡ, ಬಲ ಮತ್ತು ಮಧ್ಯ ಪಂಥಗಳಿಂದ ತಳ ಸಮುದಾಯ ಗೊಂದಲದಲ್ಲಿ ಸಿಲುಕೆ ಎಂದು ಅವರು ಅಭಿಪ್ರಾಯಪಟ್ಟರು.

ವಿಚಾರಸಂಕಿರಣವನ್ನು ಉದ್ಘಾಟಿಸಿದ ಕಾಪು ಶಾಸಕ ಲಾಲಾಜಿ ಮೆಂಡನ್ ಮಾತನಾಡಿ, ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ವಿಚಾರಧಾರೆಗಳು ಸಾರ್ವಕಾಲಿಕ ಮಾರ್ಗದರ್ಶಿ ಸೂತ್ರಗಳಾಗಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ಈ ಕುರಿತು ಅವಲೋಕಿಸುವ ಅನಿವಾರ್ಯತೆಯಿದೆ ಎಂದರು.

ಮುಖ್ಯ ಅತಿಥಿಗಳಾಗಿ ಜಿಪಂ ಸದಸ್ಯೆ ಚಂದ್ರಿಕಾ ಸಿ. ಜೆ., ತಾಪಂ ಸದಸ್ಯ ಲಕ್ಷ್ಮೀನಾರಾಯಣ ಪ್ರಭು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಸಂಪರ್ಕಾಧಿಕಾರಿ ಮತ್ತು ಪದನಿಮಿತ್ತ ಜಂಟಿ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು, ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಪ್ರೊ. ವಿನೀತ ಕೆ. ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ನಿಕೇತನ ಪ್ರಾಸ್ತಾವಿಕ ಮಾತನಾಡಿದ ರು. ಸಹ ಪ್ರಾಧ್ಯಾಪಕಿ ಸುಜಯಾ ಕೆ. ಎಸ್. ಕಾರ್ಯಕ್ರಮ ನಿರ್ವಹಿಸಿದರು. ಎನ್ನೆಸ್ಸೆಸ್ ಯೋಜನಾಧಿಕಾರಿ ಪ್ರವೀಣ ಶೆಟ್ಟಿ ಸ್ವಾಗತಿಸಿದರು. ಸುಭಾಷ್ ಹೆಚ್. ಕೆ. ವಂದಿಸಿದರು. ವಿಚಾರಸಂಕಿರಣದಲ್ಲಿ ಮಂಗಳೂರು, ಕಿಮ್ಸ್ ಬೆಂಗಳೂರು, ತುಮಕೂರು, ಮೈಸೂರು, ಕುವೆಂಪು, ಧಾರವಾಡ, ಕಾನೂನು ವಿವಿ ಬೆಂಗಳೂರು, ಮಹಿಳಾ ವಿವಿ ವಿಜಯಪುರ ಇಲ್ಲಿನ ಎನ್ನೆಸ್ಸೆಸ್ ಯೋಜನಾಧಿಕಾರಿಗಳು ಮತ್ತು ಸುಮಾರು 150 ಸ್ವಯಂಸೇವಕರು ಭಾಗವಹಿಸಿದ್ದಾರೆ.

ಬಳಿಕ ಅಂಬೇಡ್ಕರ್ ಅವರ ವಿವಿಧ ವಿಚಾರಧಾರೆಗಳ ಕುರಿತು ಎರಡು ವಿಚಾರಗೋಷ್ಠಿಗಳು ನಡೆದವು. ಮಹಿಳಾ ಚಿಂತಕಿ ಅಮೃತ ಡೀಕಯ್ಯ, ಪ್ರಗತಿ ಪರ ಚಿಂತಕ ಜಿ.ರಾಜಶೇಖರ್, ಡಾ.ಮೋಹನ್‌ಚಂದ್ರ ಗುತ್ತಿ, ಡಾ.ಪ್ರಶಾಂತ್ ನಾಯಕ್ ವಿಚಾರ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News