ಸಚಿವ ದೇಶಪಾಂಡೆಯೊಂದಿಗೆ ತಂಝೀಮ್ ಮುಖಂಡರ ನಿಯೋಗ ಭೇಟಿ

Update: 2019-01-29 17:22 GMT

ಭಟ್ಕಳ, ಜ. 29: ಖಾಸಗಿ ಸಮಾರಂಭ ವೊಂದರಲ್ಲಿ ಪಾಲ್ಗೊಳ್ಳಲು ಭಟ್ಕಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಯವರನ್ನು ಭೇಟಿ ಮಾಡಿದ ಇಲ್ಲಿ ಸಾಮಾಜಿಕ ರಾಜಕೀಯ ಸಂಸ್ಥೆ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ನ ನಿಯೋಗವರು ಜಿಲ್ಲೆಯ ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂಧಿಸಿ ಅವರ ಸಮಸ್ಯೆಗಳನ್ನು ಆಲಿಸುವ ಅವಕಾಶ ಮಾಡಿಕೊಳ್ಳುವಂತೆ ಆಗ್ರಹಿಸಿತು. 

ತಂಝೀಮ್ ಮುಖಂಡರೊಂದಿಗೆ ಮಾತನಾಡಿದ ಸಚಿವರು ನಾನು ಜನರ ಸಮಸ್ಯೆಗಳಿಗೆ ಯಾವತ್ತೂ ಸ್ಪಂಧಿಸುತ್ತೇನೆ. ಮತ್ತು ಅವರ ಸಮಸ್ಯೆಗಳನ್ನು ಆಲಿಸಲು ಸದಾ ಸಿದ್ಧನಿದ್ದೇನೆ ಎಂದರು.

ಭಟ್ಕಳ ವಿಧಾನಸಭಾ ಕ್ಷೇತ್ರದ ಸಾರ್ವಜನಿಕರೊಂದಿಗೆ ಸಭೆಯನ್ನು ನಡೆಸುವುದರ ಮೂಲಕ ಅವರ ಸಮಸ್ಯೆಗಳಿಗೆ ಸೂಕ್ತಪರಿಹಾರವನ್ನು ಒದಗಿಸ ಬೇಕೆಂದೂ ತಂಝೀಮ್ ಮುಖಂಡರು ಸಚಿವರನ್ನು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸಚಿವರು ಮುಂದೆ ಸಮಯವನ್ನು ಹೊಂದಾಣಿಕೆ ಮಾಡಿಕೊಂಡು ಭಟ್ಕಳದಲ್ಲಿ ಸಾರ್ವಜನಿಕ ಸಮಸ್ಯೆಗಳನ್ನು ಆಲಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. 

ಸಚಿವರ ಆಗಮನದ ಹಿನ್ನೆಲೆಯಲ್ಲಿ ಹಲವಾರು ಸಂಘಸಂಸ್ಥೆಗಳ ಮುಖಂಡರು ತಮ್ಮ ತಮ್ಮ ಸಮಸ್ಯೆಗಳನ್ನು ಬಗೆಹರಿಸುವಂತೆ ಸಚಿವರಲ್ಲಿ ಮನವಿ ಮಾಡಿಕೊಂಡರು.

ಭಟ್ಕಳದಲ್ಲಿ ಅತಿಕ್ರಮಣ ಸಮಸ್ಯೆ ಭಾರಿ ಸದ್ದು ಮಾಡುತ್ತಿದ್ದು ಅರಣ್ಯ ಅತಿಕ್ರಮಣದಾರರ ಹೋರಾಟ ಸಮಿತಿ ಸದಸ್ಯ ಮುಹಮ್ಮದ್ ರಿಝ್ವಾನ್ ಅತಿಕ್ರಮಣದಾರರ ಜ್ವಲಂತ ಸಮಸ್ಯೆಗಳನ್ನು ಸಚಿವರ ಮುಂದೆ ತೆರೆದಿಟ್ಟರು. ಭಟ್ಕಳದಲ್ಲಿ 30-40 ವರ್ಷಗಳಿಂದ ಅತಿಕ್ರಮಣ ಮಾಡಿ ಮನೆ ಕಟ್ಟಿ ವಾಸ್ತವ್ಯ ಮಾಡಿದವರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಒಕ್ಕಲೆಬ್ಬಿಸುತ್ತಾರೆ.  ನಾವು ಯಾವುದೇ ಹೊಸ ಅತಿಕ್ರಮಣ ಮಾಡಲು ಬಿಡುತ್ತಿಲ್ಲ, ಆದರೆ ಅತಿಕ್ರಮಣ ಮಾಡಿ ಹತ್ತಾರು ವರ್ಷಗಳಿಂದ ಅಲ್ಲಿಯೇ ಉಳಿದು ಬಂದಿರುವವರಿಗೆ ತೊಂದರೆ ಕೊಡುತ್ತಿದ್ದಾರೆ. ರಿಪೇರಿ ಮಾಡಲು ಹೋದರೆ ಸಂಪೂರ್ಣ ಕಟ್ಟಡವನ್ನೇ ಕೆಡವಿ ಹಾಕುತ್ತಾರೆ. ಹೀಗಾದರೆ ನಾವು ಯಾವ ರೀತಿಯಲ್ಲಿ  ಬದುಕು ಸಾಗಿಸಬೇಕು ಎಂದು ಅವರು ಅತಿಕ್ರಮಣದಾರರ ಅಳಲನ್ನು ತೋಡಿಕೊಂಡರು.

ಇದಕ್ಕೆ ಕೂಡಲೇ ಕಾರ್ಯಪ್ರವೃತ್ತಗೊಂಡ ಸಚಿವ ದೇಶಪಾಂಡೆ, ಈ ಕುರಿತು ದೂರವಾಣಿಯಲ್ಲಿ ಡಿ.ಎಫ್.ಓ. ಅವರೊಂದಿಗೆ ಮಾತನಾಡಿ ಬಹಳಷ್ಟು ವರ್ಷದಿಂದ ಅತಿಕ್ರಮಣ ಜಾಗಾದಲ್ಲಿ ಇದ್ದ ಮನೆಯನ್ನು ರಿಪೇರಿ ಮಾಡಲೂ ಇಲ್ಲಿನ ಆರ್. ಎಫ್. ಓ. ನೀಡುವುದಿಲ್ಲ ಎಂದರೆ ಹೇಗೆ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು. ಯಾವುದೇ ಕಾರಣಕ್ಕೂ ಇನ್ನು ಮುಂದೆ ಹಿಂದಿನಿಂದ ಇದ್ದ ಅತಿಕ್ರಮಣ ಜಾಗಾದವರಿಗೆ ತೊಂದರೆ ನೀಡದಂತೆ ತಾಕೀತು ಮಾಡಿದರು.

ಸ್ಥಳದಲ್ಲಿಯೇ ಇದ್ದ ವಲಯ ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ದೇಶಪಾಂಡೆಯವರು ಯಾವುದೇ ಬಡವರಿಗೆ ತೊಂದರೆ ನೀಡಕೂಡದು ಎಂದು ತಾಕೀತು ಮಾಡಿದರು. ಬಡವರು ಬಹಳ ವರ್ಷಗಳಿಂದ ಅತಿಕ್ರಮಣ ಮಾಡಿ ಮನೆ ಕಟ್ಟಿಕೊಂಡು ವಾಸ್ತವ್ಯ ಮಾಡಿ ಬಂದಿರುವಾಗ ಮನೆ ರಿಪೇರಿ ಮಾಡಿಕೊಳ್ಳಲು, ಇಲ್ಲವೇ ಕಟ್ಟಿಕೊಳ್ಳಲು ತೊಂದರೆ ಕೊಡಬೇಡಾ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಉ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ್, ಮಾಜಿ ಶಾಸಕ ಮಾಂಕಾಳ್ ವೈದ್ಯ, ಜೆ.ಡಿ.ನಾಯ್ಕ, ಜಿ.ಪಂ.ಸದಸ್ಯೆ ಪುಷ್ಪಾ ನಾಯ್ಕ, ಸಂಧೂ ಭಾಸ್ಕರ್ ನಾಯ್ಕ, ತಂಝೀಮ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಮುಹಿದ್ದೀನ್ ಖರೂರಿ, ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಮೌಲಾನ್ ಸೈಯ್ಯದ್ ಯಾಸಿರ್ ಬರ್ಮಾವರ್, ಕೆ.ಎಂ.ಅಶ್ಫಾಖ್, ಅಬ್ದುಲ್ ರಖೀಬ್ ಎಂ.ಜೆ., ಡಿ.ಎಫ್.ಸಿದ್ದೀಖ್, ಡಾ.ಎಸ್.ಎಂ.ಸೈಯ್ಯದ್ ಸಲೀಂ, ಜಾಲಿ.ಪ.ಪಂ ಮಾಜಿ ಅಧ್ಯಕ್ಷ ಅಬ್ದುಲ್ ರಹೀಮ್ ಶೇಖ್, ವಿಠ್ಠಲ್ ನಾಯ್ಕ, ಎ.ಪಿ.ಎಂ.ಸಿ ಅಧ್ಯಕ್ಷ ಗೋಪಾಲ್ ನಾಯ್ಕ, ಚಂದ್ರಶೇಖರ್ ಗೌಡ, ಸಂತೋಷ್ ನಾಯ್ಕ, ಶ್ರೀಪಾದ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News