ಫೆ. 2 : ಮೂಡಿಗೆರೆಯಲ್ಲಿ ಬ್ಯಾರಿ-ತುಳು ಸಾಂಸ್ಕೃತಿಕ ಸೌಹಾರ್ದ ಸಮ್ಮೇಳನ

Update: 2019-01-30 05:51 GMT

ಮೂಡಿಗೆರೆ, ಜ. 30: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ವತಿಯಿಂದ ತುಳುಕೂಟ ಮೂಡಿಗೆರೆ ಇದರ ಸಹಯೋಗದೊಂದಿಗೆ ಫೆ. 2 ರಂದು ಮೂಡಿಗೆರೆಯ ಅಡ್ಯಂತಾಯ ರಂಗಮಂದಿರದಲ್ಲಿ “ಬ್ಯಾರಿ-ತುಳು ಸಾಂಸ್ಕೃತಿಕ ಸೌಹಾರ್ದ ಸಮ್ಮೇಳನ” ಹಮ್ಮಿಕೊಳ್ಳಲಾಗಿದೆ.

ಫೆ. 2ರ ಬೆಳಗ್ಗೆ 9.30ಕ್ಕೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿದೆ. ಸಂಜೆ 5 ಗಂಟೆಗೆ ಆಯೋಜಿಸಲಾಗುವ ಸಮಾರೋಪ ಸಮಾರಂಭದಲ್ಲಿ ಜನಪ್ರತಿನಿಧಿಗಳು ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಕುಮಾರಸ್ವಾಮಿ ವಹಿಸಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ. ಜಯಮಾಲ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಕರಂಬಾರ್ ಮುಹಮ್ಮದ್, ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ, ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಮಾಜಿ ಸಚಿವರುಗಳಾದ ಮೋಟಮ್ಮ, ಬಿ.ಬಿ. ನಿಂಗಯ್ಯ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ಎ.ಸಿ. ಭಂಡಾರಿ, ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಶಾಮಣ್ಣ ಬಣಕಲ್, ಕೆ.ಆರ್. ಪ್ರಭಾಕರ್, ಮೂಡಿಗೆರೆ ತಾಲೂಕು ಪಂಚಾಯತ್ ಉಪಾಧ್ಯಾಕ್ಷರಾದ ಸವಿತ ರಮೇಶ್, ಮೂಡಿಗೆರೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ತಾಲೂಕು ಪಂಚಾಯತ್ ಅಧ್ಯಕ್ಷ ಸುಂದರ ಕುಮಾರ್, ಚಿಕ್ಕಮಗಳೂರು ಜಿಲ್ಲಾ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ. ಇಬ್ರಾಹಿಮ್, ಎರೋಲ್, ವಿದ್ವಾಂಸರಾದ ಶ್ರೀ ದಯಾನಂದ ಜಿ. ಕತ್ತಲ್‍ಸಾರ್ ಹಾಗೂ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್, ಮೂಡಿಗೆರೆ ತಾಲ್ಲೂಕು ಪಂಚಾಯತ್, ಮೂಡಿಗೆರೆ ಪಟ್ಟಣ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರುಗಳು ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ, ಭಾರತೀಯ ತ್ರೋಬಾಲ್ ತಂಡದ ನಾಯಕಿ ಗಾನ ಗೌಡ ಬಸನಿ, 15ನೇ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ಡಿ.ಎಸ್. ಜಯಪ್ಪ ಗೌಡ, ಚಿಕ್ಕಮಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಚ್.ಆರ್. ಕುಮಾರ್, ನಿವೃತ್ತ ಮುಖ್ಯೋಪಾಧ್ಯಾಯ ವಿವಿಯನ್ ಡಿಸೋಜ ಇವರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಬೆಳಗ್ಗೆ 9.30ಕ್ಕೆ ಯಕ್ಷ ದಿ ಡ್ಯಾನ್ಸರ್ಸ್ ಮೂಡಿಗೆರೆ ಇವರಿಂದ ತುಳು ನೃತ್ಯ ಪ್ರದರ್ಶನ ನಡೆಯಲಿದೆ. ನಂತರದ ಅವಧಿಗಳಲ್ಲಿ ಪತ್ರಕರ್ತರಾದ ಬಿ.ಎಂ. ಹನೀಫ್ ಇವರು ‘ಸೌಹಾರ್ದತೆಗೆ ಬ್ಯಾರಿ-ತುಳು ಭಾಷೆ ಮತ್ತು ಸಂಸ್ಕೃತಿಯ ಕೊಡುಗೆ’ ಎಂಬ ವಿಷಯದ ಕುರಿತು ಮಾತನಾಡಲಿರುವರು. ನಂತರ ನಾಟ್ಯ ಕಲಾ ಡ್ಯಾನ್ಸ್ ಇನ್‍ಸ್ಟಿಟ್ಯೂಟ್ ಜನ್ನಾಪುರ ಇವರಿಂದ ತುಳು ನೃತ್ಯ ಪ್ರದರ್ಶನ ನಡೆಯಲಿದೆ. ನಮ್ಮ ಟಿವಿ ಮಂಗಳೂರು ಮುಖ್ಯಸ್ಥರಾದ ಡಾ. ಶಿವಶರಣ ಶೆಟ್ಟಿ ಇವರು ‘ತುಳು ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಮಾಧ್ಯಮಗಳ ಕೊಡುಗೆ’ ಎಂಬ ವಿಷಯದ ಕುರಿತು ಮಾತನಾಡಲಿರುವರು.

ಕಲಾಭಾರತಿ ನೃತ್ಯ ಶಾಲೆ ಮೂಡಿಗೆರೆ ಮತ್ತು ಸಕಲೇಶಪುರ ಇವರಿಂದ ತುಳು ನೃತ್ಯ ಪ್ರದರ್ಶನ ನಡೆಯಲಿದೆ. ತುಳು ಭಾಷಾ ವಿದ್ವಾಂಸರಾದ ಪ್ರೊ.  ತುಕಾರಾಂ ಪೂಜಾರಿ ಇವರು ‘ತುಳು ಭಾಷೆ ಮತ್ತು ಸಂಸ್ಕೃತಿಯು ಎದುರಿಸುತ್ತಿರುವ ಸವಾಲುಗಳು’ ಎಂಬ ವಿಷಯದ ಕುರಿತು ಮಾತನಾಡಲಿರುವರು. ಸ್ಮಾಶ್ ದಿ ಸ್ಟೈಲ್ ಆಫ್ ದಿ ಡ್ಯಾನ್ಸ್ ಮೂಡಿಗೆರೆ ಇವರಿಂದ ತುಳು ನೃತ್ಯ ಪ್ರದರ್ಶನ ನಡೆಯಲಿದೆ.

ಮಧ್ಯಾಹ್ನ 12 ಗಂಟೆಗೆ ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಬ್ಯಾರಿ ಕವಿಗೋಷ್ಠಿಯಲ್ಲಿ ಬಶೀರ್ ಅಹ್ಮದ್ ಕಿನ್ಯ, ಹಸನಬ್ಬ ಮೂಡಬಿದ್ರೆ, ಆಯಿಶಾ ಯು.ಕೆ, ಮರಿಯಮ್ ಇಸ್ಮಾಯಿಲ್, ಅಲ್ತಾಫ್ ಬಿಳಗುಳ ಭಾಗವಹಿಸಲಿದ್ದು, ಹುಸೈನ್ ಕಾಟಿಪಳ್ಳ ಇವರು ನಿರೂಪಣೆ ಮಾಡಲಿರುವರು.

12.30 ಗಂಟೆಗೆ ಅಶ್ರಫ್ ಅಪೊಲೊ ಮತ್ತು ರಯೀಸ್ ಬಳಗದಿಂದ ಬ್ಯಾರಿ ಹಾಡುಗಳು ಮತ್ತು ಬ್ಯಾರಿ ಒಪ್ಪನೆ, 2 ಗಂಟೆಗೆ ಕೊಂಕಣಿ ಸಾಂಸ್ಕೃತಿಕ ನೃತ್ಯ ವೈವಿಧ್ಯ, 2.15 ಗಂಟೆಗೆ ಬ್ಯಾರಿ ದಫ್ ಮತ್ತು ಬ್ಯಾರಿ ಹಾಡುಗಳು, 3ಕ್ಕೆ ಅಂತರಾಷ್ಟ್ರೀಯ ಖ್ಯಾತಿಯ ಪ್ರಶಂಸ ತಂಡ ಕಾಪು ಇವರಿಂದ ‘ಬಲೆ ತೆಲಿಪುಲೆ’ ತುಳು ಹಾಸ್ಯ ಕಾರ್ಯಕ್ರಮ ನಡೆಯಲಿದೆ. 

ಸಂಜೆ 7 ಗಂಟೆಗೆ ‘ಕಲಾ ಕುಂಭ ಸಾಂಸ್ಕೃತಿಕ ವೇದಿಕೆ’ ಸುರತ್ಕಲ್ ಇವರಿಂದ ‘ಭಾರತ ವೈಭವ’ ನೃತ್ಯ ಮತ್ತು ಪ್ರಹಸನ ಕಾರ್ಯಕ್ರಮ ನಾಗೇಶ್ ಕುಲಾಲ್ ಇವರ ನಿರ್ದೇಶನದಲ್ಲಿ ನಡೆಯಲಿದೆ ಎಂದು ಅಕಾಡಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News