ಪಡುಬಿದ್ರೆ : ಟೋಲ್‌ ವಿನಾಯಿತಿಗೆ ಒತ್ತಾಯಿಸಿ ಮಸಿ ಬಳಿದು, ಅರೆಬೆತ್ತಲೆ ಪ್ರತಿಭಟನೆ

Update: 2019-01-30 09:20 GMT

ಪಡುಬಿದ್ರೆ, ಜ. 30 : ಪಡುಬಿದ್ರೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ವಾಹನಗಳಿಗೆ ಹೆಜಮಾಡಿ ಟೋಲ್‌ನಲ್ಲಿ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿ ಕರವೇ ನಡೆಸುತ್ತಿರುವ ಪ್ರತಿಭಟನೆ 23ನೇ ದಿನಕ್ಕೆ ಕಾಲಿಟ್ಟಿದ್ದು, ಬುಧವಾರ ಜಿಲ್ಲಾಡಳಿತ ವಿರುದ್ಧ ಮಸಿ ಬಳಿದು, ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಪಡುಬಿದ್ರೆ ಟೆಂಪೋ ನಿಲ್ದಾಣ ಬಳಿ 22 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಜಿಲ್ಲಾಡಳಿತ ಪ್ರತಿಭಟನಾಕಾರರ ಬೇಡಿಕೆಗೆ ಸ್ಪಂಧಿಸುತಿಲ್ಲ. ಮಂಗಳವಾರ ಸ್ಥಳ ವೀಕ್ಷಣೆಗೆ ಜಿಲ್ಲಾಧಿಕಾರಿ ಬಂದಿರಲಿಲ್ಲ. ಇದರಿಂದ ಆಕ್ರೋಶಗೊಂಡಿರುವ ಅವರು ಪ್ರತಿಭಟನೆ ನಡೆಸಿದರು.

ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್, ತಾಲೂಕು ಅಧ್ಯಕ್ಷ ಸೈಯ್ಯದ್ ನಿಝಾಮುದ್ದೀನ್, ಆಸೀಫ್ ಆಪದ್ಬಾಂಧವ ಅವರು ಮಸಿ ಬಳಿದು ಅರೆಬೆತ್ತಲೆಯೊಂದಿಗೆ ಬಿಕ್ಷಾ ಪಾತ್ರೆ ಇಟ್ಟು ಪ್ರತಿಭಟನೆ ನಡೆಸುತಿದ್ದಾರೆ. ಈ ವೇಳೆ ಜಿಲ್ಲಾಡಳಿತ, ರಾಜಕಾರಣಿ, ಜನಪ್ರತಿನಿಧಿಗಳಿಗೆ, ನವಯುಗ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಮಿಥುನ್ ರೈ ಭೇಟಿ: ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಪ್ರತಿಭಟನಾಕಾರರ ಬೇಡಿಕೆಯ ಬಗ್ಗೆ ನವಯುಗ ಅಧಿಕಾರಿಗೆ ಮೊಬೈಲ್‌ನಲ್ಲಿ ಸಂಪರ್ಕಿಸಿ ಪಡುಬಿದ್ರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿ ಇನ್ನೂ ಪೂರ್ಣಗೊಳ್ಳದೆ ಟೋಲ್ ವಸೂಲಿ ಮಾಡುತಿದ್ದು, ಸ್ಥಳೀಯರಿಗೆ ಸಮಸ್ಯೆ ಉಂಟಾಗಿದೆ. ಈ ನಿಟ್ಟಿನಲ್ಲಿ ಟೋಲ್ ವಿನಾಯಿತಿ ನೀಡಬೇಕು ಎಂದು ಹೇಳಿದರು.

ಬಳಿಕ ಮಾತನಾಡಿದ ಅವರು, ನವಯುಗ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಇದಕ್ಕೂ ಕಂಪೆನಿ ಒಪ್ಪದಿದ್ದಲ್ಲಿ ಮುಂದಿನ ದಿನಗಳಲ್ಲಿ ನಿಮ್ಮ ಎಲ್ಲಾ ಹೋರಾಟಕ್ಕೂ ತಾನು ಕೈ ಜೋಡಿಸುವುದಾಗಿ ಹೇಳಿದರು.

ಪಡುಬಿದ್ರೆ ಜನಜಾಗೃತಿ ಸಮಿತಿ ಅಧ್ಯಕ್ಷ ನವೀನ್‌ ಚಂದ್ರ ಜೆ.ಶೆಟ್ಟಿ, ಎಂ.ಪಿ.ಮೊಯಿದಿನಬ್ಬ ಮತ್ತಿತರರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News