ಗುಡಿಸಲಲ್ಲಿ ವಾಸಿಸುವ ಶಾಸಕನಿಗೆ ಮನೆ ನಿರ್ಮಿಸುತ್ತಿರುವ ಮತದಾರರು

Update: 2019-01-30 11:26 GMT

ಭೋಪಾಲ್, ಜ. 30: ರಾಜಕಾರಣಿಗಳು ಶ್ರೀಮಂತರಾಗಿರುತ್ತಾರೆ ಎಂಬುದು ಸಾಮಾನ್ಯ ನಂಬಿಕೆ. ಆದರೆ ಮಧ್ಯ ಪ್ರದೇಶದ ಶಿಯೋಪುರ್ ನಲ್ಲಿರುವ ವಿಜಯಪುರ್ ಕ್ಷೇತ್ರದ 55 ವರ್ಷದ ನೂತನ ಬಿಜೆಪಿ ಶಾಸಕ ಸೀತಾರಾಂ ಆದಿವಾಸಿ ತಮ್ಮ ಪತ್ನಿಯೊಂದಿಗೆ ಮುಳಿಹುಲ್ಲಿನ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ.

ಅವರ ಪಾಡನ್ನು ನೋಡಿ ಅವರ ಕ್ಷೇತ್ರದ ಜನತೆ ದೇಣಿಗೆ ನೀಡಿ ಅವರಿಗೆ ಮನೆಯೊಂದನ್ನು ನಿರ್ಮಿಸುತ್ತಿದ್ದಾರೆ. ಸೀತಾರಾಂ ಅವರು ಚುನಾವಣೆಯಲ್ಲಿ ಸ್ಥಳೀಯ ಪ್ರಬಲ ಕಾಂಗ್ರೆಸ್ ನಾಯಕ ರಾಮನಿವಾಸ್ ರಾವತ್ ಅವರನ್ನು ಸೋಲಿಸಿದ್ದರು.

ಶಾಸಕರು ತಮಗಾಗಿ ಹಲವು ಹೋರಾಟ ನಡೆಸಿರುವುದರಿಂದ ಅವರಿಗಾಗಿ ಮನೆ ನಿರ್ಮಿಸಲು ಎಲ್ಲರೂ ತುಂಬು ಮನಸ್ಸಿನ ಸಹಕಾರ ನೀಡುತ್ತಿದ್ದಾರೆ. ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಹಣ ನೀಡುತ್ತಿದ್ದಾರೆ. ಅವರು ಚುನಾವಣೆಯಲ್ಲಿ ಗೆದ್ದಾಗ ನಾಣ್ಯ ತುಲಾಭಾರವನ್ನೂ ಮತದಾರರು ನಡೆಸಿದ್ದು ಈ ಹಣವನ್ನೂ ಮನೆ ನಿರ್ಮಿಸಲು ಶಾಸಕರು ನೀಡಿದ್ದಾರೆ.

ತಮ್ಮ ಬಳಿ ಮನೆ ನಿರ್ಮಿಸಲು ಅಗತ್ಯ ಹಣವಿಲ್ಲ ಎಂದು ಶಾಸಕ ಒಪ್ಪಿಕೊಳ್ಳುತ್ತಾರೆ.  ಅವರು ತಮ್ಮ ಕ್ಷೇತ್ರದ ಜನರ ಕಲ್ಯಾಣಕ್ಕಾಗಿ ಹೋರಾಡುವುದರಿಂದ ಎಲ್ಲರೂ ಅವರ ಮೇಲೆ ಅಭಿಮಾನ ಹೊಂದಿದ್ದಾರೆಂದು ಶಾಸಕರ ಪತ್ನಿ ಇಮಾರ್ತಿ ಭಾಯಿ ಹೇಳುತ್ತಾರೆ.

ಚುನಾವಣೆ ಸ್ಪರ್ಧಿಸುವ ಸಂದರ್ಭ ಆಸ್ತಿ ಘೋಷಣಾ ಪತ್ರದಲ್ಲಿ ಅವರು ತಮ್ಮ ಬಳಿ ರೂ 46,733   ಹಣವಿದೆಯೆಂದು ಅದರಲ್ಲಿ ರೂ 25,000 ನಗದು  ಆಗಿದ್ದರೆ ಉಳಿದ  ಹಣ ಎರಡು ಬ್ಯಾಂಕ್ ಠೇವಣಿ ರೂಪದಲ್ಲಿದೆ ಎಂದು ಮಾಹಿತಿ ನೀಡಿದ್ದರು. ಇದರ ಹೊರತಾಗಿ ಅವರ ಗುಡಿಸಲಿರುವ 600 ಚದರ ಅಡಿ ಜಾಗ ಹಾಗೂ ಇನ್ನೊಂದು ಎರಡು ಎಕರೆ ಭೂಮಿ ಅವರ ಹೆಸರಲ್ಲಿದ್ದು ಇವುಗಳ ಮಾರುಕಟ್ಟೆ ಮೌಲ್ಯ 5 ಲಕ್ಷ ರೂ. ಆಗಿದೆ.

ಮಧ್ಯ ಪ್ರದೇಶದಲ್ಲಿ ಶಾಸಕರಿಗೆ ಮಾಸಿಕ 1.10 ಲಕ್ಷ ರೂ. ಸಂಭಾವನೆ ದೊರೆಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News