ಹುತಾತ್ಮ ದಿನ : ಗಾಂಧೀಜಿ ಪ್ರತಿಕೃತಿಗೆ 'ಗುಂಡಿಕ್ಕಿ' ಸಂಭ್ರಮಿಸಿದ ಹಿಂದೂ ಮಹಾಸಭಾ ನಾಯಕಿ
ಆಲಿಘಡ್ , ಜ. 30 : ಹುತಾತ್ಮ ದಿನದಂದು ಇಡೀ ದೇಶ ಅವರನ್ನು ಸ್ಮರಿಸುತ್ತಿರುವಾಗ ಹಿಂದೂ ಮಹಾಸಭಾದ ಹಿರಿಯ ನಾಯಕಿಯೊಬ್ಬರು ಗಾಂಧೀಜಿಯ ಪ್ರತಿಕೃತಿಗೆ ಗುಂಡಿಕ್ಕುವ ಮೂಲಕ ಅತ್ಯಂತ ಆಘಾತಕಾರಿ ವರ್ತನೆ ತೋರಿಸಿದ್ದಾರೆ. ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಎಂಬಾಕೆ ನಾಥೂರಾಮ್ ಗೋಡ್ಸೆಯಿಂದ ಗಾಂಧೀಜಿ ಹತ್ಯೆಯನ್ನು ಸ್ಮರಿಸಿ ಸಂಭ್ರಮಿಸಲು ಗಾಂಧೀಜಿಯ ಪ್ರತಿಕೃತಿಗೆ ಆಟಿಕೆಯ ಗನ್ ನಿಂದ ಗುಂಡಿಕ್ಕಿದ್ದಾರೆ. ಆಕೆ ಗುಂಡಿಕ್ಕಿದ ಕೂಡಲೇ ಗಾಂಧೀಜಿ ಪ್ರತಿಕೃತಿಯಿಂದ ರಕ್ತ ಚಿಮ್ಮುವಂತೆಯೂ ಮಾಡಲಾಗಿದೆ. ಈ ಘಟನೆ ಬುಧವಾರ ಆಲಿಘಡ್ ನಲ್ಲಿ ನಡೆದಿದೆ.
ಇದೇ ಸಂದರ್ಭದಲ್ಲಿ ಪೂಜಾ , ನಾಥುರಾಮ್ ಗೋಡ್ಸೆ ಯಾ ಪ್ರತಿಮೆಗೆ ಮಾಲಾರ್ಪಣೆಯನ್ನೂ ಮಾಡಿದ್ದಾರೆ. ಬಳಿಕ ಸೇರಿದ್ದ ಬೆಂಬಲಿಗರಿಗೆ ಸಿಹಿ ಹಂಚಿದ್ದಾರೆ. ಇಡೀ ದೇಶ ಗಾಂಧೀಜಿ ಹತ್ಯೆಯಾದ ದಿನವನ್ನು ಹುತಾತ್ಮ ದಿನವೆಂದು ಸ್ಮರಿಸಿದರೆ , ಹಿಂದೂ ಮಹಾಸಭಾ ಆ ದಿನವನ್ನು shaurya ದಿವಸ್ ಎಂದು ಆಚರಿಸುತ್ತದೆ. ಆದರೆ ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಗಾಂಧೀಜಿಯನ್ನು ಕೊಲ್ಲುವ ಆಘಾತಕಾರಿ ಘಟನೆಯನ್ನು ಪುನರಾವರ್ತಿಸಿದ್ದಾರೆ.
2014ರಲ್ಲಿ ಕಚೇರಿಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಸಿದ ಬಳಿಕ ಗೋಡ್ಸೆಯ ಪ್ರತಿಮೆ ಸ್ಥಾಪಿಸಲು ನಾವು ಪ್ರಯತ್ನಿಸಿದ್ದೆವು. ಇದಕ್ಕೆ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ವರ್ಷ ನಾವು ವಿಶೇಷ ಎಚ್ಚರಿಕೆ ವಹಿಸಿ ಗಾಂಧಿ ಜಯಂತಿಯ ದಿನದಂದು ನಾಥುರಾಮ್ ಗೋಡ್ಸೆಯ ಪ್ರತಿಮೆ ಅನಾವರಣಗೊಳಿಸಿದ್ದೇವೆ. ಗಾಂಧಿಯ ಹೆಜ್ಜೆ ಗುರುತು ಅನುಸರಿಸುವುದನ್ನು ನಿಲ್ಲಿಸುವ ಹಾಗೂ ಗೋಡ್ಸೆಯನ್ನು ಆರಾಧಿಸುವ ದಿಶೆಯಲ್ಲಿ ಇದು ನಮ್ಮ ಪ್ರಮಖ ಹೆಜ್ಜೆ ಎಂದು ಅಖಿಲ ಭಾರತೀಯ ಹಿಂದೂ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಪಂಡಿತ್ ಅಶೋಕ್ ಶರ್ಮಾ ಹೇಳಿದ್ದಾರೆ.
ಈ ನಡುವೆ, ಮಹಾತ್ಮಾ ಗಾಂಧಿ ಅವರ 71ನೇ ಪುಣ್ಯ ಸ್ಮರಣೆಯ ದಿನವಾದ ಗುರುವಾರ ರಾಷ್ಟ್ರಾದ್ಯಂತ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಹಲವು ರಾಜಕಾರಣಿಗಳು ಗಾಂಧೀಜಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.