ಎನ್‌ಎಸ್‌ಸಿಯನ್ನು ತೊರೆದ ಸದಸ್ಯರು ಸಭೆಗಳಲ್ಲಿ ಆಕ್ಷೇಪವನ್ನೆಂದೂ ವ್ಯಕ್ತಪಡಿಸಿರಲಿಲ್ಲ: ಕೇಂದ್ರ

Update: 2019-01-30 15:55 GMT

ಹೊಸದಿಲ್ಲಿ,ಜ.30: ರಾಷ್ಟ್ರೀಯ ಅಂಕಿಅಂಶ ಆಯೋಗಕ್ಕೆ ರಾಜೀನಾಮೆ ನೀಡಿರುವ ಇಬ್ಬರು ಸದಸ್ಯರು ಕಳೆದ ಕೆಲವು ತಿಂಗಳುಗಳಲ್ಲಿ ಆಯೋಗದ ಯಾವುದೇ ಸಭೆಯಲ್ಲಿ ತಮ್ಮ ಕಳವಳಗಳನ್ನು ವ್ಯಕ್ತಪಡಿಸಿರಲಿಲ್ಲ ಎಂದು ಕೇಂದ್ರವು ಬುಧವಾರ ಹೇಳಿದೆ.

ಸ್ವತಂತ್ರ ಸದಸ್ಯರಾದ ಪಿ.ಸಿ.ಮೋಹನನ್ ಮತ್ತು ಜೆ.ವಿ.ಮೀನಾಕ್ಷಿ ಅವರು ಬ್ಯಾಕ್ ಸಿರೀಸ್ ಜಿಡಿಪಿ ದತ್ತಾಂಶಗಳು ಮತ್ತು ಕಾರ್ಮಿಕ ಶಕ್ತಿ ಸಮೀಕ್ಷೆಯ ಬಿಡುಗಡೆಯಲ್ಲಿ ವಿಳಂಬದ ಕುರಿತಂತೆ ಸರಕಾರದ ನಿಲುವಿನಿಂದ ಅಸಮಾಧಾನಗೊಂಡು ಆಯೋಗವನ್ನು ತೊರೆದಿರುವ ಹಿನ್ನೆಲೆಯಲ್ಲಿ ಈ ಹೇಳಿಕೆಯು ಹೊರಬಿದ್ದಿದೆ. ಮೋಹನನ್ ಅವರು ಆಯೋಗದ ಪ್ರಭಾರ ಅಧ್ಯಕ್ಷರೂ ಆಗಿದ್ದರು.

ಮಂಗಳವಾರ ರಾತ್ರಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮೋಹನನ್ ಅವರು, “ನಾನು ಎನ್‌ಎಸ್‌ಸಿಗೆ ರಾಜೀನಾಮೆ ಸಲ್ಲಿಸಿದ್ದೇನೆ. ಇತ್ತೀಚಿನ ದಿನಗಳಲ್ಲಿ ಆಯೋಗವು ಅಷ್ಟೊಂದು ಪರಿಣಾಮಕಾರಿಯಾಗಿಲ್ಲ ಮತ್ತು ಆಯೋಗದ ಕರ್ತವ್ಯಗಳನ್ನು ನಿರ್ವಹಿಸಲು ನಮಗೆ ಸಾಧ್ಯವಾಗುತ್ತಿಲ್ಲ ಎನ್ನುವುದು ನಮ್ಮ ಅಭಿಪ್ರಾಯವಾಗಿದೆ” ಎಂದು ತಿಳಿಸಿದ್ದರು.

ಈ ಬಗ್ಗೆ ಸ್ಪಷ್ಟನೆಯನ್ನು ನೀಡಿರುವ ಅಂಕಿಅಂಶಗಳು ಮತ್ತು ಕಾರ್ಯಕ್ರಮ ಜಾರಿ ಸಚಿವಾಲಯವು, ಈ ಸದಸ್ಯರು ಇತ್ತೀಚಿನ ತಿಂಗಳುಗಳಲ್ಲಿ ಆಯೋಗದ ಯಾವುದೇ ಸಭೆಯಲ್ಲಿ ತಮ್ಮ ಆಕ್ಷೇಪಗಳನ್ನು ವ್ಯಕ್ತಪಡಿಸಿರಲಿಲ್ಲ ಎಂದು ತಿಳಿಸಿದೆ. ತಾನು ಆಯೋಗದ ಸಲಹೆಗಳನ್ನು ಗೌರವಿಸುತ್ತೇನೆ ಮತ್ತು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತೇನೆ ಎಂದೂ ಅದು ಹೇಳಿದೆ.

  ರಾಷ್ಟ್ರಿಯ ಮಾದರಿ ಸರ್ವೆ ಕಚೇರಿ(ಎನ್‌ಎಸ್‌ಎಸ್‌ಒ)ಯು ನಡೆಸಿರುವ ಕಾರ್ಮಿಕ ಶಕ್ತಿ ಸರ್ವೇಕ್ಷಣೆಗೆ ಸಂಬಂಧಿಸಿದಂತೆ ಸಚಿವಾಲಯವು,ಜುಲೈ 2017ರಿಂದ ಡಿಸೆಂಬರ್ 2018ರವರೆಗಿನ ಅವಧಿಯ ತ್ರೈಮಾಸಿಕಗಳ ದತ್ತಾಂಶಗಳನ್ನು ಎನ್‌ಎಸ್‌ಎಸ್‌ಒ ಸಂಸ್ಕರಿಸುತ್ತಿದೆ ಮತ್ತು ಅದು ಪೂರ್ಣಗೊಂಡ ಬಳಿಕ ವರದಿಯು ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದೆ.

ಬ್ಯಾಕ್ ಸಿರೀಸ್ ಜಿಡಿಪಿ ದತ್ತಾಂಶಗಳ ಕುರಿತಂತೆ ಸಚಿವಾಲಯವು,ಅದನ್ನು ಅಂತಿಮಗೊಳಿಸುವಂತೆ ಮತ್ತು ಬಿಡುಗಡೆಗೊಳಿಸುವಂತೆ ಎನ್‌ಎಸ್‌ ಸಿಯೇ ಸಲಹೆ ನೀಡಿತ್ತು ಎಂದು ಹೇಳಿದೆ.

2011-12ನ್ನು ಆಧಾರ ವರ್ಷವಾಗಿ ಪರಿಗಣಿಸುವ ಸರಣಿಯಲ್ಲಿ ಅಳವಡಿಸಿಕೊಂಡಿರುವ ಪದ್ಧತಿಗನುಗುಣವಾಗಿ ಜಿಡಿಪಿಯ ಬ್ಯಾಕ್ ಸಿರೀಸ್ ಅಂಕಿಅಂಶಗಳನ್ನು ಲೆಕ್ಕ ಹಾಕಲಾಗಿದೆ ಮತ್ತು ರಾಷ್ಟ್ರೀಯ ಲೆಕ್ಕಪತ್ರ ಅಂಕಿಅಂಶಗಳ ಕುರಿತ ಸಲಹಾ ಸಮಿತಿಯಲ್ಲಿನ ತಜ್ಞರು ಒಪ್ಪಿಕೊಂಡಿದ್ದಾರೆ ಎಂದೂ ಸಚಿವಾಲಯವು ತಿಳಿಸಿದೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಪ್ರಗತಿದರವು ಮೊದಲು ಅಂದಾಜಿಸಿದ್ದಷ್ಟು ಹೆಚ್ಚಿನ ಮಟ್ಟದಲ್ಲಿರಲಿಲ್ಲ ಎನ್ನುವುದು ಬೆಳಕಿಗೆ ಬಂದ ನಂತರ ಬ್ಯಾಕ್ ಸಿರೀಸ್ ಜಿಡಿಪಿ ಅಂಕಿಂಶಗಳು ವಿವಾದವನ್ನು ಸೃಷ್ಟಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News