×
Ad

ವಾಯುಪಡೆ ಕಾರ್ಪೊರೆಲ್ ಹತ್ಯೆ ಆರೋಪಿ: ಸಾಂಬಿಯಾ ನ್ಯಾಯಾಲಯದಿಂದ ಖುಲಾಸೆ

Update: 2019-01-30 21:32 IST

ಕೋಲ್ಕತಾ,ಜ.30: 2016,ಜನವರಿಯಲ್ಲಿ ಗಣರಾಜ್ಯೋತ್ಸವ ಪರೇಡ್‌ಗಾಗಿ ತಾಲೀಮು ನಡೆಯುತ್ತಿದ್ದಾಗ ತನ್ನ ಕಾರನ್ನು ವಾಯುಪಡೆಯ ಕಾರ್ಪೊರೆಲ್ ಅಭಿಮನ್ಯು ಗಾಡ್‌ಗೆ ಢಿಕ್ಕಿ ಹೊಡೆಸಿ ಹತ್ಯೆಗೈದಿದ್ದ ಆರೋಪಿ,ಇಲ್ಲಿಯ ಬುರ್ರಾಬಝಾರ್ ಕ್ಷೇತ್ರದ ಮಾಜಿ ಶಾಸಕ ಮುಹಮ್ಮದ್ ಸೊಹ್ರಾಬ್ ಅವರ ಪುತ್ರ ತೌಸಿಫ್ ಸೊಹ್ರಾಬ್ ಅಲಿಯಾಸ್ ಸಾಂಬಿಯಾನನ್ನು ಸಾಕ್ಷಾಧಾರಗಳ ಕೊರತೆಯಿಂದಾಗಿ ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಖುಲಾಸೆಗೊಳಿಸಿದೆ.

ಸೂರತ್ ಮೂಲದ ಗಾಡ್(21) ಅವರು ಇಲ್ಲಿಯ ಫೋರ್ಟ್ ವಿಲಿಯಮ್‌ನಲ್ಲಿರುವ ಸೇನೆಯ ಈಸ್ಟರ್ನ್ ಕಮಾಂಡ್ ಬಳಿಯ ಕಿದ್ದರ್‌ಪೋರ್ ರಸ್ತೆಯಲ್ಲಿ ಗಣರಾಜ್ಯೋತ್ಸವ ಪರೇಡ್‌ನ ತಾಲೀಮಿನಲ್ಲಿ ಭಾಗವಹಿಸಿದ್ದಾಗ ಸಾಂಬಿಯಾ ತನ್ನ ಆಡಿ ಕಾರನ್ನು ಬ್ಯಾರಿಕೇಡ್‌ಗಳಿಗೆ ಢಿಕ್ಕಿ ಹೊಡೆದು ಬಳಿಕ ಅವರಿಗೆ ಗುದ್ದಿದ್ದ.

ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಗಾಗಿ ಮತ್ತು ಸರಕಾರಿ ಆಸ್ತಿಗೆ ನಷ್ಟವನ್ನುಂಟು ಮಾಡಿದ್ದಕ್ಕಾಗಿ ಸಾಂಬಿಯಾನನ್ನು ಅಪರಾಧಿ ಎಂದು ನ್ಯಾಯಾಲಯವು ಘೋಷಿಸಿತು. ಇವೆರಡೂ ಅಪರಾಧಗಳಿಗಾಗಿ ತಲಾ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ.

2016,ಜ.17ರಂದು ಬಂಧಿಸಲ್ಪ್ಪಟ್ಟಿದ್ದ ಸಾಂಬಿಯಾ ಆಗಿನಿಂದ ಜೈಲಿನಲ್ಲಿದ್ದು, ತನ್ನ ಅಪರಾಧಗಳಿಗೆ ಗರಿಷ್ಠ ಶಿಕ್ಷೆಯ ಅವಧಿಯನ್ನು ಕಳೆದಿದ್ದಾನೆ. ಈ ಹಿನ್ನೆಲೆಯಲ್ಲಿ ಆತನನ್ನು ಬಿಡುಗಡೆಗೊಳಿಸಿದ ನ್ಯಾಯಾಲಯವು ಗಾಡ್ ಕುಟುಂಬಕ್ಕೆ ಒಂದು ಲಕ್ಷ ರೂ.ಗಳ ಪರಿಹಾರವನ್ನು ನೀಡುವಂತೆ ಮತ್ತು 10,000 ರೂ.ಗಳ ದಂಡವನ್ನು ಪಾವತಿಸುವಂತೆ ಆದೇಶಿಸಿತು.

ಸಾಂಬಿಯಾಗೆ ಆಶ್ರಯ ಒದಗಿಸಿದ್ದ ಆರೋಪಿಗಳಾದ ಮುಹಮ್ಮದ್ ಸೊಹ್ರಾಬ್, ಶಾನವಾಝ್ ಖಾನ್ ಮತ್ತು ಮುಹಮ್ಮದ್ ನೂರ್ ಅಸ್ಲಂ ಅವರನ್ನೂ ನ್ಯಾಯಾಲಯವು ಖುಲಾಸೆಗೊಳಿಸಿದೆ.

ತನಿಖಾ ತಂಡವು ಸಾಂಬಿಯಾ ವಿರುದ್ಧ ಗಾಡ್ ಹತ್ಯೆ ಮತ್ತು ಕ್ಯಾಪ್ಟನ್ ಉಮೇಶ್ ಕುಮಾರ್ ಅವರ ಹತ್ಯೆಯತ್ನ ಆರೋಪಗಳನ್ನು ಹೊರಿಸಿತ್ತು. ಘಟನೆಯಲ್ಲಿ ಕುಮಾರ್ ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News