×
Ad

ಹಂದಿಜ್ವರಕ್ಕೆ 169 ಬಲಿ: 4,500 ಮಂದಿಯಲ್ಲಿ ರೋಗಪತ್ತೆ: ವರದಿ

Update: 2019-01-30 21:36 IST

ಹೊಸದಿಲ್ಲಿ,ಜ.30: 2019ರ ಮೊದಲ ಒಂದು ತಿಂಗಳಲ್ಲಿ ಹಂದಿಜ್ವರ 169 ಮಂದಿಯನ್ನು ಬಲಿಪಡೆದಿದ್ದು, 4,571 ಮಂದಿಯಲ್ಲಿ ರೋಗಾಣು ಪತ್ತೆಯಾಗಿದೆ ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ಅಂಕಿಅಂಶ ತಿಳಿಸಿದೆ.

ರಾಜಸ್ಥಾನದಲ್ಲಿ ಅತ್ಯಂತ ಹೆಚ್ಚು ಸಾವು ಮತ್ತು ರೋಗ ಪತ್ತೆಯಾಗಿದ್ದು, ಜನವರಿ 27ರವರೆಗೆ 72 ಮಂದಿ ಹಂದಿಜ್ವರದಿಂದ ಸಾವನ್ನಪ್ಪಿದ್ದರೆ 1,856 ಮಂದಿಯಲ್ಲಿ ಎಚ್1ಎನ್1 ವೈರಾಣು ಪತ್ತೆಯಾಗಿದೆ ಎಂದು ಅಂಕಿಅಂಶ ತಿಳಿಸಿದೆ. ಜನವರಿ 27ರವರೆಗೆ ಗುಜರಾತ್‌ನಲ್ಲಿ ಹಂದಿಜ್ವರಕ್ಕೆ 20 ಮಂದಿ ಬಲಿಯಾಗಿದ್ದು, 576 ಮಂದಿ ರೋಗದಿಂದ ನರಳುತ್ತಿದ್ದಾರೆ. ದಿಲ್ಲಿಯಲ್ಲಿ ಇದೇ ವೇಳೆ ಯಾವುದೇ ಸಾವು ಸಂಭವಿಸಿಲ್ಲವಾದರೂ ಎಚ್1ಎನ್1 ರೋಗದಿಂದ ಬಾಧಿತರಾಗಿರುವ ಜನರ ಸಂಖ್ಯೆ 479ಕ್ಕೇರಿದೆ. ಹರ್ಯಾಣದಲ್ಲಿ ಇಬ್ಬರು ಮೃತಪಟ್ಟಿದ್ದರೆ 363 ಮಂದಿ ಹಂದಿಜ್ವರದಿಂದ ಬಳಲುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ವೈರಾಣುವಿನ ಹರಡುವಿಕೆಯನ್ನು ತಡೆಯಲು ಅರೋಗ್ಯ ಸಚಿವಾಲಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜೊತೆ ಸಭೆ ನಡೆಸಿದೆ. ಹಂದಿಜ್ವರದ ಔಷಧಿ ಸಾಕಷ್ಟು ಪ್ರಮಾಣದಲ್ಲಿದ್ದು ಎನ್95 ಮಾಸ್ಕ್‌ಗಳು ಮತ್ತು ರೋಗಲಕ್ಷಣ ಪತ್ತೆಮಾಡುವ ಸಾಧನಗಳಿಗೆ ಕೊರತೆಯಿಲ್ಲ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಜನರು ರೋಗವನ್ನು ತಡೆಯಲು ಏನನ್ನು ಮಾಡಬೇಕು, ಏನು ಮಾಡಬಾರದು ಎಂಬ ಬಗ್ಗೆ ಸೂಕ್ತ ಸಲಹೆಗಳನ್ನು ನೀಡುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 2018ರಲ್ಲಿ ಹಂದಿಜ್ವರಕ್ಕೆ 1,103 ಮಂದಿ ಬಲಿಯಾಗಿದ್ದರೆ 14,992 ಮಂದಿ ಬಾಧಿತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News