ಫೆಬ್ರವರಿ 1ರಂದು ಮಧ್ಯಂತರ ಬಜೆಟ್: ವಿತ್ತ ಸಚಿವಾಲಯ
ಹೊಸದಿಲ್ಲಿ,ಜ.30: ಫೆಬ್ರವರಿ ಒಂದರಂದು ಸಂಪೂರ್ಣ ಬಜೆಟ್ ಮಂಡಿಸಲಿದೆ ಎಂಬ ಊಹಾಪೋಹಗಳಿಗೆ ತೆರೆಯೆಳೆದಿರುವ ವಿತ್ತ ಸಚಿವಾಲಯ ಎಪ್ರಿಲ್ ಮತ್ತು ಮೇನಲ್ಲಿ ಲೋಕಸಭೆ ಚುನಾವಣೆಗಳು ನಡೆಯಲಿರುವುದರಿಂದ ಅಂದು ಮಧ್ಯಂತರ ಬಜೆಟ್ ಮಾತ್ರ ಮಂಡಿಸುವುದಾಗಿ ತಿಳಿಸಿದೆ.
ಕೇಂದ್ರ ಸಂಪೂರ್ಣ ಬಜೆಟ್ ಮಂಡಿಸಲಿದೆ ಎಂಬ ಮಾಧ್ಯಮ ವರದಿಗಳನ್ನು ಆಧರಿಸಿ ವಿರೋಧ ಪಕ್ಷಗಳು ಕಳೆದ ವಾರ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಸರಕಾರ ಮಧ್ಯಂತರ ಬಜೆಟ್ ಬದಲಿಗೆ ಸಂಪೂರ್ಣ ಬಜೆಟ್ ಮಂಡಿಸಲು ಮುಂದಾದರೆ ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್ ಎಚ್ಚರಿಕೆ ನೀಡಿತ್ತು. 2019-20 ವಿತ್ತ ವರ್ಷದ ಕೇವಲ 56 ದಿನಗಳಲ್ಲಿ ಹಾಲಿ ಸರಕಾರದ ಅವಧಿ ಕೊನೆಯಾಗುವುದರಿಂದ ಸಂಪೂರ್ಣ ಬಜೆಟ್ ಮಂಡನೆ ಸಾಂವಿಧಾನಿಕ ಒಡೆತನದ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಅಭಿಪ್ರಾಯಿಸಿದ್ದಾರೆ.
ಮಧ್ಯಂತರ ಬಜೆಟ್ ಮಂಡಿಸುವಂತೆ ಬಿಜೆಪಿಯ ಮಾಜಿ ನಾಯಕ ಯಶವಂತ್ ಸಿನ್ಹಾ ಸರಕಾರಕ್ಕೆ ಮನವಿ ಮಾಡಿದ್ದರು. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಂಪೂರ್ಣ ಬಜೆಟ್ ಮಂಡಿಸುವುದು ಸರಿಯಲ್ಲ ಮತ್ತು ಅಸಾಂವಿಧಾನಿಕ ಎಂದು ಅವರು ತಿಳಿಸಿದ್ದರು. ವಿತ್ತ ಸಚಿವ ಅರುಣ್ ಜೇಟ್ಲಿ ಚಿಕಿತ್ಸೆಗಾಗಿ ಅಮೆರಿಕ ತೆರಳಿರುವ ಕಾರಣ ಅವರ ಸ್ಥಾನದಲ್ಲಿ ಮಧ್ಯಂತರ ವಿತ್ತ ಸಚಿವ ಪಿಯೂಶ್ ಗೋಯಲ್ ಬಜೆಟ್ ಮಂಡಿಸಲಿದ್ದಾರೆ.