ಲೋಕಪಾಲ್, ಲೋಕಾಯುಕ್ತ ಸ್ಥಾಪನೆಗೆ ಆಗ್ರಹಿಸಿ ನಿರಶನ ಆರಂಭಿಸಿದ ಅಣ್ಣಾ ಹಝಾರೆ

Update: 2019-01-30 16:26 GMT

ಮುಂಬೈ, ಜ.30: ಪ್ರಬಲ ಲೋಕಪಾಲ ಮತ್ತು ಲೋಕಾಯುಕ್ತ ವ್ಯವಸ್ಥೆ ಸ್ಥಾಪನೆಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಝಾರೆ ಮತ್ತೊಮ್ಮೆ ಸ್ವಗ್ರಾಮ ರಾಲೇಗಣ್ ಸಿದ್ಧಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಐದು ವರ್ಷವಾದರೂ ಮೋದಿ ನೇತೃತ್ವದ ಸರಕಾರ ಲೋಕಪಾಲರ ನೇಮಕದ ಬಗ್ಗೆ ಕ್ರಮ ಕೈಗೊಂಡಿಲ್ಲ. ಈಗಲೂ ಕಾಲಮಿಂಚಿಲ್ಲ ಎಂದಿರುವ ಹಝಾರೆ, ತನ್ನ ಹೋರಾಟ ಯಾವುದೇ ವ್ಯಕ್ತಿ ಅಥವಾ ಪಕ್ಷದ ವಿರುದ್ಧವಲ್ಲ. ದೇಶದ ಒಳಿತಿಗಾಗಿ ಈ ಪ್ರತಿಭಟನೆ ಎಂದು ಹೇಳಿದ್ದಾರೆ.

ಪ್ರಧಾನಿ ವಿರುದ್ಧದ ಯಾವುದೇ ಆರೋಪಕ್ಕೆ ಜನತೆ ಸಾಕ್ಷಾಧಾರ ಒದಗಿಸಿದರೆ ಲೋಕಪಾಲರ ಮೂಲಕ ತನಿಖೆ ನಡೆಸಬಹುದು. ಇದೇ ರೀತಿ ಮುಖ್ಯಮಂತ್ರಿ, ಸಚಿವರು ಅಥವಾ ಶಾಸಕರ ವಿರುದ್ಧದ ಆರೋಪಗಳಿಗೆ ಸಾಕ್ಷಿ ಒದಗಿಸಿದರೆ ಲೋಕಾಯುಕ್ತರ ಮೂಲಕ ತನಿಖೆ ನಡೆಸಬಹುದಾಗಿದೆ. ಆದರೆ ಇದನ್ನು ಸರಕಾರ ಅಥವಾ ಯಾವುದೇ ರಾಜಕೀಯ ಪಕ್ಷಗಳು ಬಯಸುತ್ತಿಲ್ಲ. 2013ರಲ್ಲಿ ಲೋಕಪಾಲ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾಗಿದೆ. ಆದರೆ ಇನ್ನೂ ಲೋಕಪಾಲರ ನೇಮಕವಾಗಿಲ್ಲ ಎಂದು ಹಝಾರೆ ಹೇಳಿದರು. ಲೋಕಪಾಲರ ಅಧಿಕಾರ ನಿಯಂತ್ರಣಕ್ಕೆ ಮೂರು ದಿನದೊಳಗೆ ಮತ್ತೊಂದು ಕಾನೂನು ಜಾರಿಗೊಳಿಸಿ ರಾಷ್ಟ್ರಪತಿಗಳ ಅಂಕಿತವನ್ನೂ ಪಡೆಯಲಾಗಿದೆ. ಆದರೆ ಐದು ವರ್ಷವಾದರೂ ಲೋಕಪಾಲರ ನೇಮಕದ ವಿಷಯದಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿಂದೆ ನಿಮ್ಮ ಬೆಂಬಲಿಗರಾಗಿದ್ದವರಲ್ಲಿ ಹೆಚ್ಚಿನವರು ಈಗ ರಾಜಕಾರಣಿಗಳಾಗಿದ್ದಾರೆ. ಅವರನ್ನು ನಿರಶನದಲ್ಲಿ ಸೇರಿಸಿಕೊಳ್ಳುವಿರಾ ಎಂಬ ಸುದ್ದಿಗಾರರ ಪ್ರಶ್ನೆಗೆ, ವೇದಿಕೆಯಲ್ಲಿ ರಾಜಕೀಯ ಮುಖಂಡರ ಉಪಸ್ಥಿತಿಯನ್ನು ತಾನು ಇಚ್ಛಿಸುವುದಿಲ್ಲ ಎಂದು ಹಝಾರೆ ಉತ್ತರಿಸಿದರು. ಜನವರಿ 28ರಂದು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ ಹಝಾರೆ, ತಾನು ಜನವರಿ 30ರಿಂದ ಸ್ವಗ್ರಾಮ ರಾಲೇಗಣ್ ಸಿದ್ಧಿಯಲ್ಲಿ ನಿರಶನ ಆರಂಭಿಸುವುದಾಗಿ, ಮತ್ತು ಬೇಡಿಕೆ ಈಡೇರುವವರೆಗೆ ಮುಂದುವರಿಸುವುದಾಗಿ ತಿಳಿಸಿದ್ದರು. ಶೂನ್ಯ ಭ್ರಷ್ಟಾಚಾರ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಿರುವ ನೀವು ಲೋಕಪಾಲರ ನೇಮಕಕ್ಕೆ ಯಾಕೆ ಹಿಂಜರಿಯುತ್ತೀರಿ ಎಂದು ಪತ್ರದಲ್ಲಿ ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ. ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆ 2013ರ ಪ್ರಕಾರ, ಭ್ರಷ್ಟಾಚಾರ ನಿಗ್ರಹ ಪ್ರಾಧಿಕಾರವಾಗಿ ಕೇಂದ್ರ ಸರಕಾರದ ಮಟ್ಟದಲ್ಲಿ ಲೋಕಪಾಲರು ಹಾಗೂ ರಾಜ್ಯ ಸರಕಾರಗಳ ಮಟ್ಟದಲ್ಲಿ ಲೋಕಾಯುಕ್ತರನ್ನು ನೇಮಿಸಬೇಕು. ಕೇಂದ್ರ ಸರಕಾರ ಲೋಕಪಾಲರನ್ನು ನೇಮಕ ಮಾಡದಿರುವ ಬಗ್ಗೆ ಕಳೆದ ಜುಲೈಯಲ್ಲಿ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.

ಕಳೆದ ಡಿಸೆಂಬರ್‌ನಲ್ಲಿ ಲೋಕಪಾಲರು ಹಾಗೂ ಸದಸ್ಯರನ್ನು ಆಯ್ಕೆ ಮಾಡುವ ಉದ್ದೇಶದಿಂದ ಸುಪ್ರೀಂಕೋರ್ಟ್ ನ್ಯಾಯಾಧೀಶ ರಂಜನಾ ಪ್ರಕಾಶ್ ದೇಸಾಯಿ ಅಧ್ಯಕ್ಷತೆಯಲ್ಲಿ ಶೋಧನಾ ಸಮಿತಿಯನ್ನು ಕೇಂದ್ರ ಸರಕಾರ ನೇಮಿಸಿತ್ತು. ಲೋಕಪಾಲರು ಹಾಗೂ ಸಮಿತಿ ಸದಸ್ಯರಾಗಲು ಅರ್ಹ ವ್ಯಕ್ತಿಗಳ ಹೆಸರನ್ನು ಫೆಬ್ರವರಿ ಅಂತ್ಯದೊಳಗೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕೆಂದು ಈ ತಿಂಗಳ ಆರಂಭದಲ್ಲಿ ಸುಪ್ರೀಂಕೋರ್ಟ್ ಶೋಧನಾ ಸಮಿತಿಗೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News