ಕಾರ್ತಿ ಚಿದಂಬರಂ ವಿದೇಶ ಪ್ರಯಾಣಕ್ಕೆ ಸುಪ್ರೀಂ ಅನುಮತಿ: 10 ಕೋ. ರೂ. ಠೇವಣಿ ಇರಿಸಲು ಆದೇಶ

Update: 2019-01-31 06:13 GMT

ಹೊಸದಿಲ್ಲಿ, ಜ. 30: ಇದುವರೆಗೆ ತನಿಖಾ ಸಂಸ್ಥೆಯೊಂದಿಗೆ ಸಹಕರಿಸಿಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್, ‘ಕಾನೂನಿನೊಂದಿಗೆ ಆಟ ಆಡಬೇಡಿ’ ಎಂದು ಬುಧವಾರ ಕಾರ್ತಿ ಚಿದಂಬರಂಗೆ ಎಚ್ಚರಿಕೆ ನೀಡಿದೆ. ಐಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಲವಲೇಶ ಅಸಹಕಾರವನ್ನು ಕೂಡ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ಕಾರ್ತಿ ಚಿದಂಬರಂಗೆ ಸ್ಪಷ್ಟವಾಗಿ ತಿಳಿಸಿದೆ.

ಕಾನೂನಿನೊಂದಿಗೆ ಆಟ ಆಡಬೇಡಿ. ನೀವು ಇದುವರೆಗೆ ಸಹಕಾರ ನೀಡಿಲ್ಲ. ಲವಲೇಶ ಅಸಹಕಾರವನ್ನು ಕೂಡ ಸಹಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸುತ್ತೇವೆ. ನೀವು ಸಹಕಾರ ನೀಡದೇ ಇದ್ದರೆ ಈ ನ್ಯಾಯಾಲಯ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಫೆಬ್ರವರಿ ಹಾಗೂ ಮಾರ್ಚ್ ನಡುವೆ ವಿದೇಶಕ್ಕೆ ತೆರಳಲು ಅನುಮತಿ ನೀಡುವಂತೆ ಕೋರಿ ಕೀರ್ತಿ ಚಿದಂಬರಂ ಸಲ್ಲಿಸಿದ ಮನವಿಯ ವಿಚಾರಣೆ ನಡೆಸಿದ ಪೀಠ ಹೇಳಿದೆ. ನಮಗೆ ಸಾಕಷ್ಟು ಹೇಳಲು ಇದೆ. ಆದರೆ, ನಾವು ಸಂಯಮದಿಂದಿದ್ದೇವೆ. ನೀವು ಸಹಕಾರ ನೀಡಿಲ್ಲ ಎಂದು ಮಾತ್ರ ನಾವು ಹೇಳುತ್ತೇವೆ. ಎಲ್ಲಿಗೆ ಬೇಕಾದರೂ ಪ್ರಯಾಣಿಸಿ, ಏನು ಬೇಕಾದರೂ ಮಾಡಿ. ಆದರೆ, ನಿಮ್ಮ ಅಸಹಕಾರವನ್ನು ಸಹಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.

ಅನಂತರ ಪೀಠ ಕಾರ್ತಿ ಚಿದಂಬರಂಗೆ ವಿದೇಶಕ್ಕೆ ತೆರಳಲು ಅವಕಾಶ ನೀಡಿತು. ಆದರೆ, ಮಾರ್ಚ್ 5, 6, 7 ಹಾಗೂ 12ರಂದು ಜಾರಿ ನಿರ್ದೇಶನಾಲಯದ ವಿಚಾರಣೆಗೆ ಲಭ್ಯವಿರಬೇಕು. ಯಾವುದೇ ಅಸಹಕಾರವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ. ಇದಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ 10 ಕೋ. ರೂ. ಠೇವಣಿ ಇರಿಸುವಂತೆ ಪೀಠ ಕಾರ್ತಿ ಚಿದಂಬರಂಗೆ ನಿರ್ದೇಶಿಸಿದೆ. ವಿದೇಶದಿಂದ ಮರಳಿದ ಬಳಿಕ ಆ ಮೊತ್ತವನ್ನು ಹಿಂದಿರುಗಿಸಲಾಗುವುದು ಎಂದು ಪೀಠ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News