‘ನೋ-ಡೀಲ್ ಬ್ರೆಕ್ಸಿಟ್’ ತಿರಸ್ಕರಿಸಿದ ಬ್ರಿಟಿಶ್ ಸಂಸದರು

Update: 2019-01-30 16:52 GMT

ಲಂಡನ್, ಜ. 30: ಯಾವುದೇ ಒಪ್ಪಂದವಿಲ್ಲದೆ ಐರೋಪ್ಯ ಒಕ್ಕೂಟದಿಂದ ಹೊರಬರುವ (ನೋ-ಡೀಲ್ ಬ್ರೆಕ್ಸಿಟ್) ಪ್ರಸ್ತಾಪವನ್ನು ಬ್ರಿಟಿಶ್ ಸಂಸದರು ಮಂಗಳವಾರ 318-310 ಮತಗಳ ಅಂತರದಿಂದ ತಿರಸ್ಕರಿಸಿದರು. ಆದರೆ, ಈಗಾಗಲೇ ಐರೋಪ್ಯ ಒಕ್ಕೂಟದ ಜೊತೆಗೆ ಮಾಡಿಕೊಂಡಿರುವ ಹಿಂದೆಗೆತ ಒಪ್ಪಂದಕ್ಕೆ ಬದಲಾವಣೆಗಳನ್ನು ಮಾಡುವ ಪ್ರಧಾನಿ ತೆರೇಸಾ ಮೇ ಅವರ ಪ್ರಯತ್ನಗಳಿಗೆ ಬೆಂಬಲ ನೀಡಿದರು.

ಅದೇ ವೇಳೆ, ಐರೋಪ್ಯ ಒಕ್ಕೂಟದಿಂದ ಬ್ರಿಟನ್ ‘ಹೊರದಬ್ಬಲ್ಪಡುವುದನ್ನು’ ತಡೆಯಲು ಯತ್ನಿಸುವ ತಿದ್ದುಪಡಿಯೊಂದನ್ನು ಕನ್ಸರ್ವೇಟಿವ್ ಪಕ್ಷದ ಸಂಸದೆ ಕ್ಯಾರಲೈನ್ ಸ್ಪೆಲ್ಮನ್ ಮತ್ತು ಲೇಬರ್ ಪಕ್ಷದ ಸಂಸದ ಜಾಕ್ ಡ್ರೋಮಿ ಮಂಡಿಸಿದರು. ಅದು 8 ಮತಗಳ ಅಂತರದಿಂದ ಸಂಸದರ ಬೆಂಬಲವನ್ನು ಗಳಿಸಿತು. ಯಾವುದೇ ಒಪ್ಪಂದವಿಲ್ಲದೆ ಐರೋಪ್ಯ ಒಕ್ಕೂಟದಿಂದ ಹೊರಬೀಳಲು ಬ್ರಿಟನ್ ಸಿದ್ಧವಿದೆ ಎಂಬ ಸರಕಾರದ ವಾದಕ್ಕೆ ಇದರಿಂದ ಹಿನ್ನಡೆಯಾಯಿತು.

ಆದಾಗ್ಯೂ, ಈ ಫಲಿತಾಂಶವನ್ನು ಅನುಷ್ಠಾನಗೊಳಿಸಬೇಕೆಂಬ ನಿರ್ಬಂಧವೇನೂ ಸರಕಾರಕ್ಕಿಲ್ಲ.

ಐರೋಪ್ಯ ಒಕ್ಕೂಟದ ಜೊತೆ ಸಂಧಾನ ಪುನರಾರಂಭಕ್ಕೆ ಸಂಸತ್ತು ಒಪ್ಪಿಗೆ

ವಿವಾದಾಸ್ಪದ ‘ಐರಿಶ್ ಬ್ಯಾಕ್‌ಸ್ಟಾಪ್’ ಪ್ರಸ್ತಾಪಕ್ಕೆ ಪರ್ಯಾಯ ವ್ಯವಸ್ಥೆಯೊಂದನ್ನು ಕೋರುವ ಸರಕಾರ ಬೆಂಬಲಿತ ತಿದ್ದುಪಡಿಯೊಂದರ ಪರವಾಗಿ ಸಂಸದರು ಮತ ಚಲಾಯಿಸಿದರು.

‘ಬ್ರೆಕ್ಸಿಟ್’ ಬಳಿಕ ಐರ್‌ಲ್ಯಾಂಡ್ (ಐರೋಪ್ಯ ಒಕ್ಕೂಟಕ್ಕೆ ಸೇರಿದ ದೇಶ) ಮತ್ತು ನಾರ್ದರ್ನ್ ಐರ್‌ಲ್ಯಾಂಡ್ (ಬ್ರಿಟನ್‌ನ ಭಾಗ)ನಡುವೆ ಗಟ್ಟಿ ಗಡಿಯೊಂದು ಇರದಂತೆ ನೋಡಿಕೊಳ್ಳುವ ಪ್ರಸ್ತಾಪವನ್ನು ‘ಐರಿಶ್ ಬ್ಯಾಕ್‌ ಸ್ಟಾಪ್’ ಹೊಂದಿದೆ.

ಬ್ರಿಟಿಶ್ ಸಂಸದರು ಏನು ಬಯಸುತ್ತಾರೆ ಎಂಬುದರ ಸ್ಪಷ್ಟ ಸಂದೇಶದೊಂದಿಗೆ ಬ್ರಸೆಲ್ಸ್ (ಐರೋಪ್ಯ ಒಕ್ಕೂಟ) ನೊಂದಿಗಿನ ಸಂಧಾನವನ್ನು ಪುನರಾರಂಭಿಸುವ ತಿದ್ದುಪಡಿಯನ್ನು ಬೆಂಬಲಿಸುವುದಾಗಿ ತೆರೇಸಾ ಮೇ ಹೇಳಿದ್ದರು.

ಈ ಸಂಬಂಧ ಸಂಸದ ಗ್ರಹಾಂ ಬ್ರಾಡಿ ಮಂಡಿಸಿದ ತಿದ್ದುಪಡಿಯನ್ನು ಸದನವು 317-301 ಮತಗಳ ಅಂತರದಿಂದ ಅಂಗೀಕರಿಸಿತು. ಐರೋಪ್ಯ ಒಕ್ಕೂಟದೊಂದಿಗೆ ಬ್ರೆಕ್ಸಿಟ್ ಒಪ್ಪಂದವನ್ನು ಮರುರೂಪಿಸುವಂತೆ ಹಾಗೂ ವಿವಾದಾಸ್ಪದ ಐರಿಶ್ ಬ್ಯಾಕ್‌ಸ್ಟಾಪ್‌ಗೆ ಪರ್ಯಾಯವೊಂದನ್ನು ಕಂಡುಹಿಡಿಯುವಂತೆ ಈ ತಿದ್ದುಪಡಿಯು ಪ್ರಧಾನಿಗೆ ಕರೆ ನೀಡುತ್ತದೆ.

ಮರು ಸಂಧಾನಕ್ಕೆ ಐರೋಪ್ಯ ಒಕ್ಕೂಟ ಅಧಿಕಾರಿಗಳ ನಿರಾಸಕ್ತಿ

ಐರೋಪ್ಯ ಒಕ್ಕೂಟದಿಂದ ಹೊರಗೆ ಬರುವ ಒಪ್ಪಂದದ ಮರುಸಂಧಾನಕ್ಕೆ ಬ್ರಿಟನ್ ಸಂಸತ್ತು ಪ್ರಧಾನಿ ತೆರೇಸಾ ಮೇಗೆ ಅಧಿಕಾರ ನೀಡಿದೆಯಾದರೂ, ಐರೋಪ್ಯ ಒಕ್ಕೂಟದ ಅಧಿಕಾರಿಗಳು ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ವಿವಾದಾಸ್ಪದ ‘ಬ್ಯಾಕ್‌ಸ್ಟಾಪ್’ ಕುರಿತ ಮಾತುಕತೆಗಳನ್ನು ಪುನರಾರಂಭಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News