ವೆನೆಝುವೆಲದಲ್ಲಿ ಬಂದಿಳಿದ ರಶ್ಯದ ಪ್ರಯಾಣಿಕ ವಿಮಾನ

Update: 2019-01-30 17:11 GMT

ಕ್ಯಾರಕಸ್, ಜ. 30: ರಶ್ಯದ ಪ್ರಯಾಣಿಕ ವಿಮಾನವೊಂದು ವೆನೆಝುವೆಲ ರಾಜಧಾನಿ ಕ್ಯಾರಕಸ್‌ಗೆ ಬಂದಿದ್ದು, ಭಾರೀ ಊಹಾಪೋಹಗಳಿಗೆ ಕಾರಣವಾಗಿದೆ.

ವೆನೆಝುವೆಲ ಅಧ್ಯಕ್ಷ ನಿಕೊಲಸ್ ಮಡುರೊ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಅಮೆರಿಕ ನಡೆಸುತ್ತಿರುವ ಪ್ರಯತ್ನಗಳ ಹಿನ್ನೆಲೆಯಲ್ಲಿ, ತನ್ನ ಮಿತ್ರ ಮಡುರೊ ರಕ್ಷಣೆಗಾಗಿ ರಶ್ಯ ಮುಂದಾಗಿದೆ ಎನ್ನಲಾಗುತ್ತಿದೆ.

ರಶ್ಯದ ‘ನಾರ್ಡ್‌ವಿಂಡ್ ಏರ್‌ಲೈನ್ಸ್’ಗೆ ಸೇರಿದ ಸುಮಾರು 400 ಪ್ರಯಾಣಿಕರಿಗೆ ಸ್ಥಳಾವಕಾಶ ಇರುವ ಬೋಯಿಂಗ್ 777 ವಿಮಾನವು ಮಾಸ್ಕೋದಿಂದ ನೇರವಾಗಿ ಕ್ಯಾರಕಸ್ ತಲುಪಿದೆ. ಅದನ್ನು ಈಗ ವಿಮಾನ ನಿಲ್ದಾಣದ ಖಾಸಗಿ ಮೂಲೆಯೊಂದರಲ್ಲಿ ನಿಲ್ಲಿಸಲಾಗಿದೆ.

ವಿಮಾನವು ಕ್ಯಾರಕಸ್‌ಗೆ ಯಾಕೆ ಬಂದಿದೆ ಎಂಬ ಬಗ್ಗೆ ನಾರ್ಡ್‌ವಿಂಡ್ ಆಗಲಿ, ವೆನೆಝುವೆಲ ಸರಕಾರವಾಗಲಿ ಈವರೆಗೆ ವಿವರಣೆ ನೀಡಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಊಹಾಪೋಹಗಳು

 ರಶ್ಯದ ವಿಮಾನವು ಕ್ಯಾರಕಸ್‌ ಗೆ ಬಂದಿಳಿದ ಬಳಿಕ, ವೆನೆಝುವೆಲದ ಸಾಮಾಜಿಕ ಜಾಲತಾಣಗಳು ಊಹಾಪೋಹಗಳಿಂದ ತುಂಬಿವೆ. ದೇಶದಿಂದ ಪರಾರಿಯಾಗುವಾಗ ಮಡುರೊಗೆ ರಕ್ಷಣೆ ನೀಡಲು ಬಾಡಿಗೆ ಸೈನಿಕರನ್ನು ಕರೆತರಲಾಗಿದೆ ಎಂಬುದಾಗಿ ಓರ್ವ ಸಂಶಯಪಟ್ಟರೆ, ಅದಕ್ಕೆ ಚಿನ್ನವನ್ನು ತುಂಬಿಸಲಾಗುತ್ತಿದೆ ಎಂಬುದಾಗಿ ಇನ್ನೋರ್ವ ವ್ಯಕ್ತಿ ಅಭಿಪ್ರಾಯಪಟ್ಟಿದ್ದಾನೆ.

ಈ ಊಹಾಪೋಹಗಳಿಗೆ ಪುರಾವೆಯಿಲ್ಲದಿದ್ದರೂ, ಅಧಿಕಾರದಿಂದ ಕೆಳಗಿಳಿಯುವಂತೆ ಮಡುರೊ ಮೇಲೆ ಅಂತಾರಾಷ್ಟ್ರೀಯ ಸಮುದಾಯದಿಂದ ಅಭೂತಪೂರ್ವ ಒತ್ತಡ ಬಂದಿರುವ ಹಿನ್ನೆಲೆಯಲ್ಲಿ, ದೇಶದಲ್ಲಿ ಅನಿಶ್ಚಿತ ಪರಿಸ್ಥಿತಿ ನೆಲೆಸಿರುವುದನ್ನು ಈ ಊಹಾಪೋಹಗಳು ಸೂಚಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News